ಸಿಬಿಎಸ್‍ಇ 10ನೇ ತರಗತಿಯಲ್ಲಿ ಸಿದ್ಧಗಂಗಾ ಶಾಲೆಗೆ ಶೇ.100

ದಾವಣಗೆರೆ, ಆ.3 – 2020-21 ನೇ ಸಾಲಿನ ಸಿಬಿಎಸ್‍ಇ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು, ನಗರದ ಸಿದ್ಧಗಂಗಾ ಶಾಲೆಗೆ 100 ಕ್ಕೆ 100 ಫಲಿತಾಂಶ ಬಂದಿದೆ.

ನಿರಂತರ ಮೌಲ್ಯಮಾಪನದನ್ವಯ ಫಲಿತಾಂಶ ನಿರ್ಧರಿಸಲಾಗಿದ್ದು, ಟೆಸ್ಟ್‍ಗಳ 10 ಅಂಕಗಳು ಅರ್ಧವಾರ್ಷಿಕ ಪರೀಕ್ಷೆಯ 30 ಅಂಕಗಳು, 3 ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಂದ 40 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನದ 20 ಅಂಕಗಳು ಒಟ್ಟು 100 ಅಂಕಗಳ ಸೂತ್ರದಡಿ ಅಂಕಗಳನ್ನು ಕ್ರೋಢೀಕರಿಸಲಾಗಿದೆ. ಶಾಲಾ ಆರಂಭಿಕ ದಿನಗಳಲ್ಲಿ ನಿಧಾನಗತಿಯಲ್ಲಿರುವ ಅಭ್ಯಾಸ ಪ್ರಕ್ರಿಯೆ ಬೋರ್ಡ್ ಪರೀಕ್ಷೆಯು ಸನ್ನಿಹಿತವಾಗುತ್ತಿದ್ದಂತೆ ಶ್ರದ್ಧೆಯಿಂದ ಓದುವುದು ಮಕ್ಕಳ ರೂಢಿ. ಆದರೆ, ಈ ಬಾರಿ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಪೂರ್ಣ ಸಿದ್ಧತೆ ನಡೆಸಿದ್ದ ಹಲವಾರು ಮಕ್ಕಳಿಗೆ ಈ ಫಲಿತಾಂಶ ನಿರಾಸೆ ಮೂಡಿಸಿದೆ. 

ಸಿದ್ಧಗಂಗಾ ಶಾಲೆಯ ಆರ್. ಪುನೀತ್  ಮತ್ತು ಪಿ.ತರುಣ್ ಶೇ.94.80 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 32 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಆನ್‍ಲೈನ್ ಪಾಠಗಳನ್ನು ಕೇಳಿ ಉತ್ತಮ ಫಲಿತಾಂಶ ನೀಡಿರುವ ಮಕ್ಕಳನ್ನು ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಉಪಪ್ರಾಂಶುಪಾಲರಾದ ಮಿಶೈಲ್ ಅನ್ವಿತಾ ಡಿ’ಸೌಜ, ಆಡಳಿತ ಮಂಡಳಿಯ ಹೇಮಂತ್, ಜಯಂತ್ ಮತ್ತು ಪ್ರಶಾಂತ್‌ ಅವರು ಅಭಿನಂದಿಸಿದ್ದಾರೆ.