ನಿಮ್ಮ ಪರವಾಗಿಯೂ ಮಠಾಧೀಶರು ಇರದಿದ್ದರೆ, ನೀವು ಶಾಸಕರೇ ಆಗುತ್ತಿರಲಿಲ್ಲ

ಮಾನ್ಯರೇ, 

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್‌ ಅವರು ಮಠಾಧೀಶರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗಳನ್ನು ವಿರೋಧಿಸುತ್ತಿರುವುದನ್ನು ನೋಡಿದರೆ ಹಾಸ್ಯಾಸ್ಪದವೆನಿಸುತ್ತದೆ.

ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಶಾಸಕರು ಮಾತ್ರವಲ್ಲದೇ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ತಮ್ಮ ಸಮುದಾಯದ ಒಬ್ಬ ನಾಯಕನಿಗೆ ಆಗುತ್ತಿರುವ ಅನ್ಯಾಯವನ್ನು ಆ ಸಮುದಾಯದ ಅಧ್ಯಕ್ಷರಾಗಿ ವಿರೋಧಿಸುತ್ತಿದ್ದಾರೆಯೇ ವಿನಃ ಬೇರೆ ಕಾರಣದಿಂದಲ್ಲ, ಸಮುದಾಯದ ಅಧ್ಯಕ್ಷರಾಗಿ ಆ ಸಮುದಾಯದ ಏಳಿಗೆಗಾಗಿ ಶ್ರಮಿಸುವುದು ಅವರ ಕರ್ತವ್ಯವಾಗಿದ್ದು, ಅವರ ನಡೆ ಸಮುದಾಯದ ಹಿತದೃಷ್ಟಿಯಿಂದ ಸ್ವಾಗತಾರ್ಹ. ಇದನ್ನು ವಿರೋಧಿಸುತ್ತಿರುವ ಶಾಸಕರ ನಡೆ ನೋಡಿದರೆ ಅವರಿಗೆ ಸಮುದಾಯಕ್ಕಿಂತ ವೈಯಕ್ತಿಕ ಲಾಭವೇ ಮುಖ್ಯವೆನಿಸುತ್ತದೆ.

ಇನ್ನು ಮಠಾಧೀಶರ ನಡೆಯ ಬಗ್ಗೆ ಸಾರ್ವಜನಿಕರು ಮತ್ತು ಇತರ ನಾಯಕರು ವಿರೋಧಿಸುತ್ತಿರುವುದು ಏನೇ ಇರಲಿ. ಆದರೆ, ಮಠಾಧೀಶರ ಕೃಪಾ ಕಟಾಕ್ಷದಿಂದಲೇ ಶಾಸಕರಾಗಿ ರಾಜಕೀಯ ಏಳಿಗೆಯನ್ನು ಕಂಡ ರವೀಂದ್ರ ನಾಥ್ ಅವರು ಈಗ ಮಠಾಧೀಶರ ನಡೆಯನ್ನು ವಿರೋಧಿಸುತ್ತಿರುವುದು ಮಾತ್ರ ಹಾಸ್ಯಾಸ್ಪದವಲ್ಲದೇ ಬೇರೇನೂ ಅಲ್ಲ. ಅವರು 1994ರ ವಿಧಾನಸಭಾ ಚುನಾವಣೆಯ ಇತಿಹಾಸವನ್ನು ಮರೆತಂತಿದೆ.

1989ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜದ ಹಿರಿಯರೆಲ್ಲರೂ ತೀರ್ಮಾನಿಸಿದ ಅಭ್ಯರ್ಥಿ ಎನ್.ಜಿ.ಪುಟ್ಟಸ್ವಾಮಿ ವಿರುದ್ಧ ತಾವು ಸ್ಪರ್ಧಿಸಿ 5030 ಮತಗಳನ್ನು ಪಡೆದಿದ್ದೀರಿ. ಆಗ ಎನ್.ಜಿ.ಪುಟ್ಟಸ್ವಾಮಿ ಅವರು 16763 ಮತಗಳನ್ನು ಪಡೆದಿದ್ದರು. ಆದರೂ ಮಠಾಧೀಶರು 1994 ರ ವಿಧಾನಸಭಾ ಚುನಾವಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತ ಪಡೆದ ನಿಮಗೆ ಬಹಿರಂಗ ಬೆಂಬಲ ನೀಡಿ ಆಶೀರ್ವದಿಸದಿದ್ದರೆ ನೀವೆಲ್ಲಿ ಶಾಸಕರಾಗುತ್ತಿದ್ದಿರಿ ಅಲ್ಲವೇ ???? ಮಠಾಧೀಶರ ಮಾತಿಗೆ ಬೆಲೆಕೊಟ್ಟು ಚುನಾವಣೆಯಿಂದ ಹಿಂದೆ ಸರಿದ ಎನ್.ಜಿ.ಪುಟ್ಟಸ್ವಾಮಿ ಅವರು ಈಗ ರಾಜಕೀಯ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಮಠಾಧೀಶರ ಆಶೀರ್ವಾದದಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದ ನೀವು ಇಂದು ಮಠಗಳನ್ನು, ಮಠಾಧೀಶರುಗಳನ್ನೇ ದೂಷಿಸುತ್ತಿ ದ್ದೀರಾ…… ಎಂತಹ ವಿಪರ್ಯಾಸವಲ್ಲವೇ ????

– ಕೆ.ಎಲ್.ಹರೀಶ್ ಬಸಾಪುರ.