ಹರಿಹರ : 17 ಪರೀಕ್ಷಾ ಕೇಂದ್ರಗಳಲ್ಲಿ 3127 ವಿದ್ಯಾರ್ಥಿಗಳು

ಹರಿಹರ : 17 ಪರೀಕ್ಷಾ ಕೇಂದ್ರಗಳಲ್ಲಿ 3127 ವಿದ್ಯಾರ್ಥಿಗಳು

ಹರಿಹರ, ಜು.17- ತಾಲ್ಲೂಕಿನಲ್ಲಿ ನಾಡಿದ್ದು ದಿನಾಂಕ 19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಲಾಗಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಹೇಳಿದರು. 

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಇಂದು ಏರ್ಪಾಡಾಗಿದ್ದ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ತಾ.ಪಂ., ನಗರಸಭೆ, ಆರೋಗ್ಯ ಇಲಾಖೆ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಹರಿಹರ ತಾಲ್ಲೂಕಿನಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 9, ನಗರದಲ್ಲಿ 6 ಮತ್ತು ಮಲೇಬೆನ್ನೂರು ನಗರದಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3127 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1598 ವಿದ್ಯಾರ್ಥಿಗಳ,  1529 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಸಲು 414 ಸಿಬ್ಬಂದಿಗಳ ನೇಮಕ ಮಾಡಲಾಗಿದ್ದು, ಶಿಕ್ಷಕರಿಗೆ ಲಸಿಕೆ, ಕೋವಿಡ್ ಪರೀಕ್ಷೆ ಸಹ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಶಾಲೆಯ ಹೊರ ಆವರಣದಲ್ಲಿ ಸಹಾಯವಾಣಿ ಮತ್ತು ಆರೋಗ್ಯ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯ ಬಳಿ 3 ಆರೋಗ್ಯ ಸಿಬ್ಬಂದಿಗಳು ಇರುತ್ತಾರೆ. ತುರ್ತು ಆರೋಗ್ಯ ಸಮಸ್ಯೆ ಬಂದಾಗ ನಗರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ರಾಮಚಂದ್ರಪ್ಪ ಅವರು ವಿವರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಮಾತನಾಡಿ, ಒಂದು ವೇಳೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗೆ ಕೋವಿಡ್  ಬಂದಲ್ಲಿ ಅವರನ್ನು ತಕ್ಷಣವೇ ಗುತ್ತೂರು ಬಳಿ ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಪರೀಕ್ಷೆ ಬರೆಸಲಾಗುತ್ತದೆ‌.  ಕೋವಿಡ್ ಇರುವಂತಹ ವಿದ್ಯಾರ್ಥಿ ಗಳಿಗೂ ಸಹ ಪರೀಕ್ಷೆ ಬರೆಸಲು ಗುತ್ತೂರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆಗೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಹಾಜರಾದ ವಿದ್ಯಾರ್ಥಿಗಳಲ್ಲಿ ಯಾರಿಗಾದರೂ ಕೆಮ್ಮು, ನೆಗಡಿ, ಜ್ವರ, ತಲೆನೋವು ಇದ್ದ ಸಂದರ್ಭದಲ್ಲಿ ಅವರಿಗೆ ಪ್ರತ್ಯೇಕ ಸ್ಥಳದಲ್ಲಿ ಪರೀಕ್ಷೆ ಬರೆಯಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್. ಲಕ್ಷ್ಮಿ, ಸಿಪಿಐ ಸತೀಶ್ ಕುಮಾರ್, ತಾ.ಪಂ. ಇಓ ಗಂಗಾಧರನ್, ಇಸಿಓ ಮಂಜುನಾಥ್, ಬಸವರಾಜಯ್ಯ ಕಿರಣ್  ಇನ್ನಿತರರು ಹಾಜರಿದ್ದರು. ‌