ಕಾಲೇಜು ಹೋರಾಟಕ್ಕೆ ಇಚ್ಛಾಶಕ್ತಿ ಬೇಕು

ಕಾಲೇಜು ಹೋರಾಟಕ್ಕೆ ಇಚ್ಛಾಶಕ್ತಿ ಬೇಕು

ಹರಿಹರ, ಜು.10- ಹರಿಹರ ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಕೇವಲ ಹೋರಾಟ ವಷ್ಟೇ ಸಾಲದು, ರಾಜಕೀಯ ನಾಯಕರ ಹಾಗೂ ಆಡಳಿತ ನಡೆಸುತ್ತಿರುವವರ  ಇಚ್ಛಾ ಶಕ್ತಿ ಅತ್ಯವಶ್ಯ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.

ನಗರದ ನಾಗರಿಕ ಹೋರಾಟ ಸಮಿತಿ ಹಾಗೂ ಮಾಧ್ಯಮ ಮಿತ್ರರ ವತಿಯಿಂದ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಹೋರಾಟದ ನಿಮಿತ್ತವಾಗಿ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ನಾನು ಶಾಸಕನಾಗಿದ್ದಾಗ 400 ಕೋಟಿ ರೂ. ತಂದು  ಕೆಲಸವನ್ನು ಮಾಡಿದ್ದರ ಜೊತೆಗೆ, ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನವರ ಬಳಿ ವೈದ್ಯಕೀಯ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರಿಂದ ಬಂದದ್ದು, §ನಿಮ್ಮ ಜಿಲ್ಲೆಯ ದೊಡ್ಡವರು ಹರಿಹರದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜ್ ಮಾಡಲು ಬಿಡುತ್ತಾರಾ?¬ ಎಂಬ ಪ್ರಶ್ನೆ.  ನಾನು ನನ್ನ ವೈಯಕ್ತಿಕ ಬೇಡಿಕೆಯನ್ನು ಕೇಳುತ್ತಿಲ್ಲ.ವೈದ್ಯಕೀಯ ಕಾಲೇಜು ಮಂಜೂರು ಮಾಡಿದರೆ ನನ್ನ ಕ್ಷೇತ್ರದ ಜನತೆಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಹೇಳಿದೆ. ಅದಕ್ಕೆ ಅವರು, ತಮ್ಮ ಅಧಿಕಾರದ ಕೊನೆಯ ಬಜೆಟ್ ಸಮಯದಲ್ಲಿ ಘೋಷಣೆ ಮಾಡುವುದಾಗಿ ಭರವಸೆಯ ಮಾತನ್ನು ಹೇಳಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಅನೇಕ ಅಧಿಕಾರಿಗಳ ವರ್ಗಾವಣೆ ಮಾಡಿಸಲು ಈಗಿನ ಶಾಸಕ ಎಸ್. ರಾಮಪ್ಪ ಓಡಾಟ ಮಾಡಿದರು. ಆ ಕೆಲಸದ ಜೊತೆಗೆ ತಾಲ್ಲೂಕಿನ ಅಭಿವೃದ್ಧಿಯ ಕೆಲಸಕ್ಕೆ ಬೇಡಿಕೆಯನ್ನು ಇಟ್ಟಿದ್ದರೆ ಒಳ್ಳೆಯದಾಗುತ್ತಿತ್ತು. ಆದರೆ ಅವರಿಗೆ ಆ ಚಿಂತನೆ ಇರಲಿಲ್ಲ. ಅವರ ಮೂರು ವರ್ಷಗಳ ಅವಧಿಯಲ್ಲಿ ಹೋರಾಟ ಮಾಡಿ ವೈದ್ಯಕೀಯ ಕಾಲೇಜು ತರಬಹುದಿತ್ತು ಎಂದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಕೂಡ 2008 ರಿಂದ 2013 ರವರೆಗೆ ಇದ್ದ ಬಿಜೆಪಿ ಸರ್ಕಾರದಲ್ಲಿ ಅವರು ದೂರ ದೃಷ್ಟಿಇಟ್ಟಕೊಂಡು ಕ್ಷೇತ್ರದ ಅಭಿವೃದ್ಧಿಗೆ ಬೇಡಿಕೆಯನ್ನು ಸಲ್ಲಿಸಬಹುದಾಗಿತ್ತು. ನಾನು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ದನಿ ಎತ್ತುವವರೆಗೂ ಯಾವೊಬ್ಬ ನಾಯಕರೂ ಧ್ವನಿ ಎತ್ತದೆ ಇರುವುದು ವಿಪರ್ಯಾಸ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಸಂಸದರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವ ವಿಚಾರದಲ್ಲಿ ಯಾವ ಸ್ಥಳದಲ್ಲಿ ಸ್ಥಾಪನೆ ಮಾಡಿಸಬೇಕು ಎಂಬ ಚಿಂತನೆ ಮಾಡಬೇಕಾಗಿತ್ತು. ಅದನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಗಮನವನ್ನು ಸೆಳೆದು ಜಿಲ್ಲೆಗೆ ವೈದ್ಯಕೀಯ ಕಾಲೇಜು ತರುವುದಾಗಿ ಹೇಳಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಪಕ್ಷದ ವತಿಯಿಂದ ಅಭಿನಂದನೆಗಳು ಎಂದರು.

 

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹರಿಹರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಿದರೆ ನಮ್ಮ ಕ್ಷೇತ್ರದ ಮತದಾರರು ಹೆಚ್ಚು ವಿಶ್ವಾಸ ಇಡುತ್ತಾರೆ.  ಕೇವಲ ದಾವಣಗೆರೆ ನಗರವನ್ನು ಅಭಿವೃದ್ಧಿ ಪಡಿಸಿದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹೇಗೆ ಆಗಲಿದೆ? ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 90  ಕೋಟಿ ರೂ. ಹಣದಲ್ಲಿ ದಾವಣಗೆರೆ ನಗರಕ್ಕೆ ಬೇಕಾದ ಎಲ್ಲಾ ವೈದ್ಯಕೀಯ ಸೇವೆಗಳ ತಯಾರಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಎಲ್ಲವನ್ನೂ ದಾವಣಗೆರೆ ನಗರಕ್ಕೆ ತರುವುದಕ್ಕಿಂತ  ಅವಳಿ ನಗರ ಎಂದು ಕರೆಯುವ ಹರಿಹರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮುಂದಾಗಲಿ ಎಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ಶಾಸಕ ಎಸ್. ರಾಮಪ್ಪನವರ ರಾಜಕೀಯ ಕೆಸರಾಟ, ಟಿಕೆಟ್ ಪೈಪೋಟಿ ನೋಡಿದೆ. ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ವಿಚಾರ ಮಾತನಾಡುವ ಹಾಗಿಲ್ಲ. ಅದು ಸರ್ವೇ ಸಾಮಾನ್ಯವಾಗಿದೆ‌. ಶಾಸಕರು ಕೇವಲ ಹೇಳಿಕೆಗಳನ್ನು ಕೊಡುವುದು ಬಿಟ್ಟು ಚುನಾವಣೆಗೆ ಸೀಮಿತ ಕೆಲಸವನ್ನು ಮಾಡುವುದನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಿ. ಇಲ್ಲದೇ ಹೋದರೆ ನಿಮ್ಮ ಬಗ್ಗೆ ಕ್ಷೇತ್ರದ ಜನತೆ ಇಟ್ಟಿರುವ ವಿಶ್ವಾಸ ಕಡಿಮೆ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಎನ್.ಹೆಚ್. ಶ್ರೀನಿವಾಸ್,  ನಗರಸಭೆ ಸದಸ್ಯರಾದ ಎ. ವಾಮನಮೂರ್ತಿ, ದಾದಾ ಖಲಂದರ್, ಪಿ.ಎನ್. ವಿರೂಪಾಕ್ಷ, ಮುಜಾಮಿಲ್,   ಜೆಡಿಎಸ್ ಮುಖಂಡ, ದೂಡಾ ಮಾಜಿ ಸದಸ್ಯ ಹೆಚ್. ನಿಜಗುಣ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಪ್ರೊ. ಭಿಕ್ಷಾವರ್ತಿಮಠ್, ಸುರೇಶ್ ಚಂದಾಪೂರ್, ಡಿ. ಉಜ್ಜೇಶ್, ಅಂಗಡಿ ಮಂಜುನಾಥ್, ಮಾರುತಿ ಬೇಡರ್, ಅಮರಾವತಿ ನಾಗರಾಜ್, ರಾಜು, ಜಾಕೀರ್, ಆಸೀಫ್, ಅಡಿಕಿ ಕುಮಾರ್, ಧನ್ಯಕುಮಾರ್, ಮಹೇಶ್, ಶಂಕರ್ ಮೂರ್ತಿ, ಪ್ರೀತಂ ಬಾಬು, ರಮೇಶ್, ಬೆಣ್ಣೆ ವಿಜಯಕುಮಾರ್, ಶಂಕರಮೂರ್ತಿ ಇನ್ನಿತರರು ಹಾಜರಿದ್ದರು.