ಜೂ.14ರ ನಂತರ ಐದು ಹಂತದ ಅನ್‌ಲಾಕ್

ಜೂ.14ರ ನಂತರ ಐದು ಹಂತದ ಅನ್‌ಲಾಕ್

ಪಾಸಿಟಿವ್ ಪ್ರಮಾಣ ಹೆಚ್ಚಾಗಿರುವ ದಾವಣಗೆರೆ ಸೇರಿ ಹತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಕೆ ಸಾಧ್ಯತೆ

ಬೆಂಗಳೂರು, ಜೂ.9 – ಕೊರೊನಾ ಸಾಂಕ್ರಾಮಿಕ ರೋಗ ಪೂರ್ಣ ಪ್ರಮಾಣ ದಲ್ಲಿ ಹತೋಟಿಗೆ ಬಾರದ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ದಾವಣಗೆರೆ ಸೇರಿದಂತೆ, ಹತ್ತು ಜಿಲ್ಲೆಗಳಲ್ಲಿ ಜೂನ್ 14 ರ ನಂತರವೂ ಒಂದು ವಾರಗಳ ಕಾಲ ಲಾಕ್‍ಡೌನ್ ಮುಂದುವರೆಯುವ ಸಾಧ್ಯತೆ ಇದೆ. 

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾಂಕ್ರಾಮಿಕ ರೋಗ ಹರಡುವಿಕೆ ಕಡಿಮೆಯಿದ್ದರೂ ಈ ಜಿಲ್ಲೆಗಳಲ್ಲಿ  ಶೇ. 10 ರಿಂದ 26 ಪಾಸಿಟಿವಿಟಿ ವರದಿಗಳಿವೆ. 

ಬೆಂಗಳೂರು ನಗರದಲ್ಲಿ ಅಚ್ಚರಿ ರೀತಿಯಲ್ಲಿ ಸಾಂಕ್ರಾಮಿಕ ರೋಗ ಹರಡು ವಿಕೆ ಶೇ. 45 ರಿಂದ ಶೇ. 2ಕ್ಕೆ ಇಳಿದಿದೆ. ಇಂತಹ ಜಿಲ್ಲೆಗಳಲ್ಲಿ ಬಹುತೇಕ ನಾಳೆ ಇಲ್ಲವೇ ಜೂನ್ 14 ರಿಂದ ಲಾಕ್‍ಡೌನ್ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. 

ತಜ್ಞರು ನೀಡಿರುವ ವರದಿಯನ್ನು ಆಧರಿಸಿ, ಮುಖ್ಯಮಂತ್ರಿಯವರು ಸೋಂಕು ಹೆಚ್ಚಳವಿರುವ ಮೈಸೂರು, ಮಂಡ್ಯ ಸೇರಿದಂತೆ ಹತ್ತು ಜಿಲ್ಲೆಗಳ ಆಡಳಿತ ದೊಂದಿಗೆ ನಾಳೆ ವಿಡಿಯೋ ಸಂವಾದ ನಡೆಸಲಿದ್ದಾರೆ. 

ಈ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನೀಡುವ ವರದಿಯನ್ನಾ ಧರಿಸಿ, ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳಲಿದ್ದಾರೆ. ತಜ್ಞರ ಶಿಫಾರಸ್ಸಿನಂತೆ ಈ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಡೆ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಲಿದೆ. 

ಮುಂದಿನ ಜುಲೈ ತಿಂಗಳು ಇಲ್ಲವೇ ನವೆಂಬರ್ ವರೆಗೆ ಸಭೆ, ಸಮಾರಂಭ, ಜಾತ್ರೆಗಳು, ರಾಜಕೀಯ ಸಮಾರಂಭಗಳು ನಡೆಸುವಂತಿಲ್ಲ. ಸಿನಿಮಾ ಮಂದಿರ ಎಂದಿ ನಂತೆ ಬಂದ್ ಆಗಿರುತ್ತದೆ. ಜೂನ್ ಅಂತ್ಯ ದವರೆಗೂ ಈಜುಕೊಳ, ಜಿಮ್‍ಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. 

ಶುಕ್ರವಾರದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಳ್ಳು ತ್ತಿರುವುದರಿಂದ ಗುರುವಾರವೇ ಅನ್‍ಲಾಕ್ ಘೋಷಣೆ ಹೊರಬೀಳಬಹುದು. ಸೋಂಕು ಪ್ರಮಾಣ ಶೇ. 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಸಬಹುದು ಎನ್ನಲಾಗುತ್ತಿದೆ. ಬೀದರ್‌ನಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಶೇ. 1ಕ್ಕಿಂತ ಕಡಿಮೆ ಇದೆ. ಈ ಮೂಲಕ ಬೀದರ್ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. 

ಮಹಾರಾಷ್ಟ್ರ, ದೆಹಲಿ, ಹರಿಯಾಣ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ‍ಅನ್ನು ಈಗಾಗಲೇ ಅಲ್ಲಿನ ಸರ್ಕಾರಗಳು ತೆರವುಗೊಳಿಸಿವೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸರ್ಕಾರ ಐದು ಹಂತಗಳಲ್ಲಿ ಲಾಕ್‍ಡೌನ್ ತೆರವುಗೊಳಿಸಲಿದೆ.

ಯಾವ ಜಿಲ್ಲೆಯಲ್ಲಿ ಶೇ.5ಕ್ಕಿಂತಲೂ ಪಾಸಿಟಿವಿಟಿ ದರ ಕಡಿಮೆ ಇದೆಯೋ ಅಂತಹ ಜಿಲ್ಲೆಗಳಲ್ಲಿ ಶೇ.50ರಷ್ಟು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವ ಸಾಧ್ಯತೆ ಇದೆ. ಶೇ.5 ರಿಂದ ಶೇ.7, ಶೇ.7 ರಿಂದ ಶೇ.10ರಷ್ಟು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಶೇ.30ರಷ್ಟು ಚಟುವಟಿಕೆಗಳಿಗೆ ಅನುಮತಿ ಸಿಗಲಿದೆ.

ಯಾವ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿದೆಯೋ ಅಂತಹ ಜಿಲ್ಲೆಗಳಲ್ಲಿ ಈಗಿರುವ ಸ್ಥಿತಿಯೇ ಯಥಾಸ್ಥಿತಿ ಮುಂದುವರಿಯಲಿದೆ. ಅಂದರೆ ಈ ಜಿಲ್ಲೆಗಳಲ್ಲಿ ಈಗಾಗಲೇ ವಿಧಿಸಿರುವ ಲಾಕ್‍ಡೌನ್‍ನಲ್ಲಿ ಯಾವುದೇ ರೀತಿಯ ಬದಲಾವಣೆಗಳು ಇರುವುದಿಲ್ಲ.