ಕಾಲ ಕ್ಷಣಿಕ ಕಣೋ…

ಕಾಲ ಕ್ಷಣಿಕ ಕಣೋ…

ಇಂಥದ್ದೊಂದು ಸಂದರ್ಭ ಎಲ್ಲರೂ ನೋಡುವಂತಾಗಿಬಿಟ್ಟಿದೆ. ಮೊನ್ನೆ ಆಫೀಸ್‌ಗೆ ಬಂದವ ಇಂದು ಇಲ್ಲ. ಹಾರ್ಟ್‌ಅಟ್ಯಾಕ್, ನಿನ್ನೆ ಉಂಡು ಚೆನ್ನಾಗಿ ಮಲಗಿದ್ದ ಅಪ್ಪ ಬೆಳಗ್ಗೆ ಮೇಲೇಳಲೇ ಇಲ್ಲ. ಒಂಭತ್ತು ತಿಂಗಳು ತನ್ನನ್ನು ತನ್ನ ಕೂಸನ್ನು ಜೋಪಾನ ಮಾಡಿದ್ದ ಗರ್ಭಿಣಿ ಕಾಣದೊಂದು ಜೀವಿಯ ಅಬ್ಬರಕ್ಕೆ ಉಸಿರು ಕೊಟ್ಟಾಗಿತ್ತು. ಕಟ್ಟುಮಸ್ತಾಗಿದ್ದ ಸದಾ ಹಸನ್ಮುಖಿ ಸ್ನೇಹಿತ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಕೊನೆಯುಸಿರೆಳೆದಿದ್ದ. ರಸ್ತೆ ಇಕ್ಕೆಲಗಳಲ್ಲಿ ನೀರವ ಮೌನ, ಆಸ್ಪತ್ರೆಗಳ ತುಂಬಾ ಜನಗಳ ಆಕ್ರಂದನ, ಸ್ಮಶಾನಗಳಲ್ಲಿ ನಿಲ್ಲುತ್ತಲೇ ಇಲ್ಲ ಹೆಣಗಳ ದಹನ…! ಗಂಗೆಯ ಮಡಿಲಲ್ಲಿ ಉಸಿರುಗಟ್ಟಿ ತೇಲಾಡಿದ ಅದೆಷ್ಟು ಜೀವ-ಜೀವನ…! ಭೂ ತಾಯಿಯ ಒಡಲು ಇನ್ನು ತಣ್ಣಗಾದಂತೆ ಕಾಣುತ್ತಿಲ್ಲ…! ಯಾವ್ದೋ ಜನ್ಮದ ಸಿಟ್ಟನ್ನ ಆ ಭಗವಂತ ಮರೆತಂತೆ ಕಾಣುತ್ತಿಲ್ಲ.

ಆಫೀಸ್, ಕೆಲಸ, ಮನೆ, ಮಕ್ಕಳು, ಶಾಲೆ, ಕಾಲೇಜು, ಹೊಲ, ಗದ್ದೆ, ದುಡ್ಡು, ಬಂಗಾರ, ಮದುವೆ ಇದರಲ್ಲೇ ಬ್ಯುಸಿ ಆಗಿದ್ದ ಮಾನವ ಕುಲದ ಒಂದು ಯಾಂತ್ರಿಕ ಬದುಕಿಗೆ ಕಾಣದ ಜೀವಿಯೊಂದು ಅರ್ಧ ವಿರಾಮ ಇಟ್ಟಂತಾಗಿದೆ. ಮರದ ಎಲೆಗಳ ಹಾಗೆ ಉದುರುತ್ತಿರುವ ಜೀವಗಳ ಮಧ್ಯೆ ರುಚಿ ಕಳೆದುಕೊಂಡಿದ್ದ ಸಂಬಂಧಗಳ ಪ್ರಾಮುಖ್ಯತೆಯನ್ನು ಮತ್ತೆ ಮನುಷ್ಯ ಜೀವಿ ನೆನಪು ಮಾಡಿಕೊಳ್ಳುವಂತಾಗಿದೆ. ಆಸ್ಪತ್ರೆಗಳಲ್ಲಿ ಸಿಗದ ಬೆಡ್ಡು, ಖಾಲಿ ಜೇಬುಗಳು, ಹತ್ತಿರದವರ ನರಳಾಟ, ಸಾವು, ವಿಫಲ ಸರ್ಕಾರ, ಕಳೆದುಕೊಂಡ ಕೆಲಸ, ಯುಗಾದಿಯ ಬೇವು ಬೆಲ್ಲದಲ್ಲಿ ಬೆಲ್ಲ ಕರಗಿ ಬರಿ ಬೇವು ಉಳಿದಂತಾಗಿದೆ ಅನೇಕರ ಜೀವನ. ನಾಳೆಗಳ ನಂಬಿಕೆಗಳು ಸತ್ತು ಹೋಗಿ, ಎಲ್ಲೆಲ್ಲೂ ಭಯ, ಚಿಂತೆಗಳ ಕಾರ್ಮೋಡ…! ತನ್ನದೇ ದೇಹ ಪ್ರಕೃತಿಯಿಂದ ದೂರಾಗಿ, ಸಂಬಂಧಗಳ, ಸಮಯದ ಬೆಲೆ ಗೊತ್ತಿಲ್ಲದೇ ಜೀವಿಸುತ್ತಿದ್ದ ಮಾನವ ಜೀವಿಗೆ ತನ್ನೊಳಗೊಂದು ಶ್ವಾಸಕೋಶವಿದೆ, ಆಮ್ಲಜನಕದ ಅವಶ್ಯಕತೆ ಇದೆ, ಉಸಿರಿನ ಮಹತ್ವ ನೆನಪು ಮಾಡಲು ಕೊರೊನಾ ಎಂಬ ಮಹಾಮಾರಿ ಬರಬೇಕಾಯಿತು. 

ವರ್ಷಗಟ್ಟಲೆ ಕೂಡಿಟ್ಟ ಹಣ, ಬ್ಯಾಂಕಿನ FD, ಅವಶ್ಯಕತೆಗೂ ಹೆಚ್ಚು ಗುಡ್ಡೆ ಹಾಕಿದ್ದ ಬಂಗಾರ, ಮಾಡಿಟ್ಟ ಆಸ್ತಿಗಳು, ತೆಗೆದುಕೊಂಡಿದ್ದ ಲಂಚ ಯಾವುದು ಕೂಡ ಜೀವಗಳನ್ನು ಉಳಿಸಲು ವಿಫಲವಾಗುತ್ತಿವೆ. ರಾತ್ರಿಯಾಗಿ  ಬೆಳಗಾಗುವುದರೊಳಗೆ ಅದೆಷ್ಟೋ ನಮ್ಮವೇ ಸುತ್ತಲಿನ ಜೀವಗಳು ಉಸಿರು ಕಳೆದುಕೊಳ್ಳುತ್ತಿವೆ. ಇಂತಹದೊಂದು ಘೋರ ಗಳಿಗೆಯ ನಡುವೆಯೂ ಆರೋಗ್ಯವಾಗಿರುವ ನಾವುಗಳು ಭಗವಂತನ ಸ್ಮರಿಸೋಣ. ಬೆಳಗ್ಗೆ ಎದ್ದಾಗ ಮುಖದ ಮೇಲೊಂದು ನಗುವಿರಲಿ. ಎಲ್ಲರೊಟ್ಟಿಗೆ ಸಂತೋಷವಾಗಿದ್ದು ಬಿಡೋಣ. ತಿಂಗಳಿನಿಂದ ಮುನಿಸಿಕೊಂಡು ಮಾತು ಬಿಟ್ಟಿದ್ದ ಗೆಳತಿಗೊಂದು ಕರೆ ಮಾಡಿ  ಐ ಲವ್ ಯು ಹೇಳಿಬಿಡಿ…. ಶಾಲೆಯ ಗೆಳೆಯನೊಂದಿಗೆ ಹಳೆಯ ನೆನಪುಗಳನ್ನು ಹಸಿ ಮಾಡಿಕೊಂಡುಬಿಡಿ… ಯಾವತ್ತೂ ಏನೂ ಕೇಳದ ಅಮ್ಮನಿಗೊಂದು ಅವಳಿಷ್ಟದ ಸೀರೆ ತಂದುಕೊಟ್ಟುಬಿಡಿ. ಮುಖ ಗಂಟು ಹಾಕಿ ಕೂತ ಅಪ್ಪನಿಗೆ ಬಿಸಿ ಅಪ್ಪುಗೆಯ ಸಿಹಿ ನೀಡಿ ಬಿಡಿ. ದಿನಂಪ್ರತಿ ನಿಮ್ಮ ಚಾಕರಿ ಮಾಡುವ ಆಫೀಸ್ ಬಾಯ್, ಸೆಕ್ಯೂರಿಟಿ ಗಾರ್ಡ್‌ಗೆ ನಗುತ್ತಾ ಒಂದು ಊಟ ಕೊಡಿಸಿಬಿಡಿ… ಮಾಡುವ ಕೆಲಸ ಸ್ವಲ್ಪ ಬದಿಗಿಟ್ಟು ನಿಮ್ಮ ಸಹೋದ್ಯೋಗಿಗಳೊಂದಿಗೆ ಹರಟೆ ಹೊಡೆದುಬಿಡಿ…. ನಗುವಿರಲಿ, ಪ್ರೀತಿಯಿರಲಿ, ಆತ್ಮೀಯತೆ ಇರಲಿ, ಸ್ನೇಹವಿರಲಿ. ನೆನಪಿರಲಿ… ಕೊನೆವರೆಗೂ ಉಳಿಯೋ ಆಸ್ತಿ… ಪ್ರೀತಿ ಒಂದೇನೆ. ಕ್ಷಣ ಮಾತ್ರ ನಮ್ಮದು…. ನಿಂತಾಗ ಬುಗುರಿಯಾಟ, ಎಲ್ಲರೂ ಒಂದೇ ಓಟ, ಕಾಲ ಕ್ಷಣಿಕ ಕಣೋ…!


ರಾಘವೇಂದ್ರ ಬಿ.
ಬೆಂಗಳೂರು.
raghu.biet@gmail.com