ತಟ್ಟೆ-ಲೋಟ ಬಡಿದು ಪ್ರತಿಭಟನೆ

ತಟ್ಟೆ-ಲೋಟ ಬಡಿದು ಪ್ರತಿಭಟನೆ

ಸಾರಿಗೆ ನೌಕರರ ಪ್ರತಿಭಟನೆಗೆ ಕುಟುಂಬದವರ ಸಾಥ್‌

ದಾವಣಗೆರೆ, ಏ. 12 –  ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವಾಗಿ ಕುಟುಂಬದ ಸದಸ್ಯರು, ಸಿಐಟಿಯು, ರಾಜ್ಯ ರೈತ ಸಂಘ (ಕೋಡಿ ಹಳ್ಳಿ ಚಂದ್ರಶೇಖರ್ ಬಣ), ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಸೋಮ ವಾರ ಶಿವಯೋಗಿ ಮಂದಿರದ ಆವರಣದಲ್ಲಿ  ತಟ್ಟೆ – ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಶಿವಯೋಗಿ ಮಂದಿರ ಆವರಣದಲ್ಲಿ ಪ್ರತಿಭ ಟನೆ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಮುಂದಾಗುತ್ತಿ ದ್ದಂತೆ, ಪೊಲೀ ಸರು ಅವಕಾಶ ನೀಡಲಿಲ್ಲ. ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಜಿಲ್ಲಾಧಿಕಾರಿ ಇಲ್ಲವೇ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸ ಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಭಟನಾ ಕಾರರು, ಕಳೆದ ಬಾರಿ ಮುಷ್ಕರದ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಈ ಬಾರಿಯೂ ಮುಷ್ಕರ ಪ್ರಾರಂಭವಾಗುವ ಮೊದಲೇ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಶೋಷಣೆಗೆ ಒಳಗಾಗಿರುವ ನೌಕರರಿಗೆ  ಯಾವು ದೇ ತಾತ್ಕಾಲಿಕ ಪರಿಹಾರ  ನೀಡದೆ, ಆತ್ಮವಿಶ್ವಾಸ ತುಂಬುವ ಯಾವುದೇ ಮಧ್ಯಂತರ ಪರಿಹಾರ ನೀಡದೆ ಮುಷ್ಕರ ನಿಷೇಧ ಮಾಡಿ ಆದೇಶ ಹೊರಡಿಸಿರುವುದು ಸರ್ಕಾರದ ಹೊಣೆಗೇಡಿತನ ಎಂದವರು ದೂರಿದರು.

ಸರ್ಕಾರ ಮುಷ್ಕರದ ನಿಷೇಧಾಜ್ಞೆಯನ್ನು ಕೂಡಲೇ ವಾಪಸ್ ಪಡೆದು, ಹೋರಾಟ ನಿರತ ಮುಖಂಡರ ಜೊತೆ ಮಾತುಕತೆ ಮುಂದುವರಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿ ಸಲು ಮುಂದಾಗಬೇಕು. ಯುಗಾದಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಯಾಗದೆ, ಸುಗಮ ಸಂಚಾರಕ್ಕಾಗಿ ಮಾತುಕತೆಯ ಮೂಲಕ ಆಗುವ ಒಪ್ಪಂದವೊಂದು ಆರೋಗ್ಯಕ ರವಾದ ಮಾರ್ಗವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಆನಂದರಾಜ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ, ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಅಪ್ಪನ ಬೇಡಿಕೆಗಾಗಿ ಮಕ್ಕಳ ಮೊರೆ

ಯುಗಾದಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಸಾರಿಗೆ ಸಂಸ್ಥೆಯ ಉದ್ಯೋಗಿಗಳ ಮಕ್ಕಳು ಸೋಮವಾರ ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮ ನೋವು ಹೊರ ಹಾಕಿದ್ದಾರೆ.

ಮನೆಯಲ್ಲಿ ರೇಷನ್ ಖಾಲಿ ಆಗಿದೆ. ಹಬ್ಬನೂ ಇಲ್ಲ – ಊಟನೂ ಇಲ್ಲ. ವೇತನ ನೀಡುವ ಜೊತೆಗೆ, ಆರನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಹನ ಎಂಬ ಬಾಲಕಿ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಪ್ರತಿಜ್ಞಾ ಎಂಬ ಬಾಲಕಿ ಮಾತನಾಡಿ, ನಾನು ಆರು ತಿಂಗಳಿಂದ ಸೈಕಲ್ ಬೇಕು ಎಂದು ಅಪ್ಪನನ್ನು  ಕೇಳುತ್ತಿದ್ದೇನೆ. ಅಪ್ಪನ ವೇತನದಲ್ಲಿ ಒಂದು ರೂಪಾಯಿಯೂ ಉಳಿಯದೇ ಸೈಕಲ್ ಆಸೆಯನ್ನೇ ಬಿಟ್ಟಿದ್ದೇನೆ. ವೇತನ ಹೆಚ್ಚಾದರೆ ಜೀವನ ನಡೆಸಲು ಆಗುತ್ತದೆ ಎಂದರು.

ಬೆಳಗ್ಗೆ  ಐದಾರು ಗಂಟೆ ಸುಮಾರಿಗೆ ಕೆಲಸಕ್ಕೆ ಹಾಜರಾಗಿ ರಾತ್ರಿ ಎಂಟಾದರೂ ಮನೆಗೆ ಬರದೆ ಎಷ್ಟೋ ಬಾರಿ ಕೆಲಸ ಮಾಡುತ್ತಾರೆ. ಹಾಗಿದ್ದರೂ ಸಹ ದುಡಿಮೆಗೆ ತಕ್ಕ ಫಲವನ್ನು ಸರ್ಕಾರ ನೀಡುತ್ತಿಲ್ಲ. ಈಗ ರೇಷನ್ ಸಹ ಇಲ್ಲದಂತಾಗಿದೆ. ನಾವು ಜೀವನ ಸಾಗಿಸುವುದಾದರೂ ಹೇಗೆ ಎಂದು ನೌಕರರೊಬ್ಬರ ಪತ್ನಿ ಅಳಲು ತೋಡಿಕೊಂಡರು. ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗುವ ತನಕ ನಾವೂ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಮನೆಯವರ ಬೇಡಿಕೆ ಈಡೇರಿಸಬೇಕು. ಇಲ್ಲ ಅಂದರೆ ನಮ್ಮದು ಮತ್ತು ನಮ್ಮ ಮಕ್ಕಳ ಶಾಪ ಖಂಡಿತವಾಗಿಯೂ
ತಟ್ಟೇ ತಟ್ಟುತ್ತದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಆಕ್ರೋಶ ವ್ಯಕ್ತಪಡಿಸಿದರು.