ದರೋಡೆ ಪ್ರಕರಣ : ಅಪರಾಧಿಗೆ ಜೈಲು ಶಿಕ್ಷೆ

ದಾವಣಗೆರೆ, ಏ.6- ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ಪಂಚಲೋಹದ ಮೂರ್ತಿ ಹಾಗೂ ಪಾದುಕೆಗಳ ಜೊತೆಗೆ ಚಾಕುವಿನಿಂದ ಹಲ್ಲೆ ಮಾಡಿ ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಅಪಹರಿಸಿ ದರೋಡೆಗೆ ಯತ್ನಿಸಿದ್ದ ಅಪರಾಧಿಗೆ ಇಲ್ಲಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಇಂದು ತೀರ್ಪು ನೀಡಿದೆ.

ನಗರದ ಅಶೋಕ ನಗರ ವಾಸಿ ಬಸವರಾಜ್ ಶಿಕ್ಷೆಗೆ ಗುರಿಯಾದ ಆರೋಪಿ. ನಗರದ ದೇವರಾಜ್ ಅರಸ್ ಬಡಾವಣೆ §ಸಿ’ ಬ್ಲಾಕ್‌ನ 5ನೇ ಕ್ರಾಸ್‌ನ ಮನೆಯಲ್ಲಿ ನೀಲಮ್ಮ ಅವರು ಒಬ್ಬರೇ ವಾಸವಾಗಿದ್ದರು. 

2014ರ ಮಾರ್ಚ್ 24ರಂದು ಮಧ್ಯಾಹ್ನ ಆರೋಪಿ ಬಸವರಾಜ್ ಮನೆಗೆ ಅಕ್ರಮ ಪ್ರವೇಶ ಮಾಡಿ, ದೇವರ ಮನೆಯಲ್ಲಿಟ್ಟಿದ್ದ ಪಂಚಲೋಹದ ಲಕ್ಷ್ಮೀದೇವಿಯ ಮೂರ್ತಿ ಹಾಗೂ 2 ಪಾದುಕೆಗಳನ್ನು ಕಳ್ಳತನ ಮಾಡಿಕೊಂಡು ಅಲ್ಲಿದ್ದ ನೀಲಮ್ಮನಿಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಅವರ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಮನೆಯಿಂದಾಚೆ ಪರಾರಿಯಾಗಲು ಯತ್ನಿಸಿದ್ದಾನೆ. 

ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಬಸವನಗರ ಠಾಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯನ್ನು ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿ, ಆರೋಪಿಯ ವಿರುದ್ಧ ನಗರದ ಸಿಪಿಐ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ವಿಚಾರಣೆ ನಡೆದು, ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಆರೋಪಿ ಬಸವರಾಜನಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದರು.