ಪಾಲಿಕೆ ಉಪ ಚುನಾವಣೆ: 100% ಕಾಂಗ್ರೆಸ್ ಗೆಲುವು ಖಚಿತ

ದಾವಣಗೆರೆ, ಮಾ.27- ಮಹಾನಗರ ಪಾಲಿಕೆಯ 2 ವಾರ್ಡ್‌ಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಬಹುಮತದೊಂದಿಗೆ ಜಯ ಗಳಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಡಿ.ಬಸವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎರಡೂ ವಾರ್ಡ್‌ಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಪಿ.ಟಿ. ಪರಮೇಶ್ವರ ನಾಯ್ಕ ಅವರೊಂದಿಗೆ ಎಲ್ಲಾ 21 ವಾರ್ಡ್‌ಗಳ ಸದಸ್ಯರು ಹಾಗೂ ಮುಖಂಡರು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ವಾರ್ಡ್‌ಗಳ ಜನತೆ ಬಿಜೆಪಿಯನ್ನು ಸೋಲಿಸಿ ಬುದ್ದಿ ಕಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ಕಳೆದ ಹದಿನಾಲ್ಕು ತಿಂಗಳು ಪಾಲಿಕೆ ಆಡಳಿತ ನಡೆಸಿದ ಬಿಜೆಪಿ ಒಂದು ಸಭೆಯನ್ನು ಮಾತ್ರ ಅಧಿಕೃತವಾಗಿ ನಡೆಸಿರುವುದು ನೋಡಿದರೆ ಆ ಪಕ್ಷದ ಆಡಳಿತ ವೈಖರಿ ಎಂಥದ್ದು ಎಂಬುದು ತಿಳಿಯುತ್ತದೆ. ಬಿಜೆಪಿಯವರಿಗೆ ಆಡಳಿತ ಮಾಡಿ ಗೊತ್ತಿಲ್ಲ. ಕೇವಲ ಆಪರೇಷನ್ ಮಾಡುವುದು ಮಾತ್ರ ಗೊತ್ತು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಂದಿಗೂ ನಗರದಲ್ಲಿ ನಡೆಯುತ್ತಿರುವ ಅನೇಕ ಅಭಿವೃದ್ಧಿ ಕಾರ್ಯಗಳು ಹಿಂದಿನ ಕಾಂಗ್ರೆಸ್‌ ಅವಧಿಯವು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಎರಡೂ ವಾರ್ಡುಗಳಿಂದ ಸ್ಪರ್ಧಿಸಲು ಏಳೆಂಟು ಆಕಾಂಕ್ಷಿಗಳು ಹೆಸರು ನೀಡಿದ್ದರು. ಆದರೆ ಶಾಮನೂರು ಶಿವಶಂಕರಪ್ಪ ಹಾಗೂ ಶಾಮನೂರು ಮಲ್ಲಿಕಾರ್ಜುನ್ ಅವರು ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ.  

ಎರಡೂ ವಾರ್ಡ್‌ ನಾಗರಿಕರು ಕಾಂಗ್ರೆಸ್ ಬಿಟ್ಟು ಕೊಡುವುದಿಲ್ಲವೆಂದು ಹೇಳಿದ್ದಾರೆ ಎಂದರು.

ಪಾಲಿಕೆ ಸದಸ್ಯ ಚಮನ್ ಸಾಬ್, ಲಂಚ ಹಾಗೂ ಮಂಚ ಎರಡನ್ನೇ ತಿಳಿದ ಬಿಜೆಪಿ ಮುಖಂಡರಿಗೆ  ಜನತೆ ಬುದ್ದಿ ಕಲಿಸಬೇಕು  ಎಂದರು. 

ಅಯೂಬ್ ಪೈಲ್ವಾನ್  ಮಾತನಾಡಿ, ಮುಸ್ಲಿಮರ ಮತಗಳನ್ನು ವಿಭಜನೆ ಮಾಡಲು ಮಹಮ್ಮದ್ ಮುಜಾಹಿದ್ ಪಾಶಾ ಅವರಿಗೆ ಬೆಂಬಲಿಸುವ ಮೂಲಕ ಬಿಜೆಪಿ ಹಿಂಬಾಗಿಲಿನಿಂದ ಪ್ರಯತ್ನಿಸುತ್ತಿದೆ. ಆದರೆ ಮತದಾರರು ಪ್ರಜ್ಞಾವಂತರಿದ್ದು, ಬಿಜೆಪಿ ತಂತ್ರ ಫಲಿಸುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಭಾನ್, ಕೆ.ಎಂ. ಮಂಜುನಾಥ್, ಇಮ್ತಿಯಾಜ್ ಖಾನ್, ದಾದಾಪೀರ್, ಶಿವಕುಮಾರ್, ದಾದಾಪೀರ್ ಶೇಖರಪ್ಪನಗರ ಇತರರು ಉಪಸ್ಥಿತರಿದ್ದರು.