ರಾಜ್ಯ ಬಜೆಟ್ : ಸಿಐಟಿಯು ನೇತೃತ್ವದಲ್ಲಿ ಧರಣಿ

ರಾಜ್ಯ ಬಜೆಟ್ : ಸಿಐಟಿಯು ನೇತೃತ್ವದಲ್ಲಿ ಧರಣಿ

ಹರಪನಹಳ್ಳಿ, ಮಾ.15- ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕರೆಯ ಮೇರೆಗೆ ತಾಲ್ಲೂಕು ಅಂಗನವಾಡಿ ನೌಕರರು ಉಪವಾಸ ಸತ್ಯಾಗ್ರಹ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೆಚ್ಚುವರಿ ಕೆಲಸಗಳಿಗೆ ಬಹಿಷ್ಕಾರ ಹಾಕುತ್ತೇವೆ ಎಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದೆ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದರು. 

ಅಂಗನವಾಡಿ ನೌಕರರು ಕಡಿಮೆ ಸೌವಲತ್ತುಗಳಲ್ಲಿ ದುಡಿಯುತ್ತಿದ್ದಾರೆ. ಅಲ್ಲದೇ ಕೊರೊನಾ ಸಂಕಷ್ಟದಲ್ಲಿ ಷರತ್ತುಗಳು ಇಲ್ಲದೇ ಜೀವದ ಹಂಗು ತೊರೆದು ಕೆಲಸ ನಿರ್ವಹಿಸಿ 28 ನೌಕರರು ಬಲಿಯಾಗಿದ್ದಾರೆ. 

ಸರ್ಕಾರ ನೀಡಿದ ಭರವಸೆಯಂತೆ ಸೇವಾ ಜೇಷ್ಠತೆ ಆಧಾರದಲ್ಲಿ ನೀಡಬೇಕಾಗಿದ್ದ ಹಣವನ್ನು ಪಾವತಿಸಿಲ್ಲ. ನಿವೃತ್ತರಿಗೆ ನೀಡಬೇಕಾದ ಇಡಿ ಗಂಟನ್ನು ಪರಿಗಣಿಸಿಲ್ಲ. 

ಸಮಾಜ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಬಜೆಟ್‍ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರೂ, ಒಂದಾದರೂ ಇಲ್ಲಿಯವರೆಗೂ ಸೇರ್ಪಡೆಯಾಗಿಲ್ಲ. 

ಇನ್ನಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಮಾ.16 ರಿಂದ ಅಂಗನವಾಡಿ ನೌಕರರು ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಆರ್‍ಡಿಪಿಆರ್, ಬಿಪಿಎಲ್, ಭಾಗ್ಯಲಕ್ಷ್ಮಿ, ಮಾತೃವಂದನಾ, ಸ್ತ್ರೀಶಕ್ತಿ, ಚುನಾವಣೆ ಇನ್ನೂ ಮುಂತಾದ ಕೆಲಸಗಳನ್ನು ಬಹಿಷ್ಕರಿಸುತ್ತೇವೆ. ಅಲ್ಲದೇ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂದು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದೇವೆ ಎಂದರು.

ತಾಲ್ಲೂಕು ಅಧ್ಯಕ್ಷೆ ಎಸ್. ಜಲಜಮ್ಮ, ಮುಖಂಡರಾದ ರಶೀದಾ, ಪಾರ್ವತಿ, ಸುನೀತಾ, ಈರಮ್ಮ, ಮಹಾದೇವಿ ಇನ್ನಿತರರು ಭಾಗವಹಿಸಿದ್ದರು.