ಎಸ್.ಪಿ.ಬಿ. ಮರೆಯಲಾಗದ ಮಾಣಿಕ್ಯ

ಎಸ್.ಪಿ.ಬಿ. ಮರೆಯಲಾಗದ ಮಾಣಿಕ್ಯ

ಗೀತ ನಮನ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಮಾ.13- ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ನೆನಪು ದಾವಣಗೆರೆ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಅವರು ಮರೆಯಲಾಗದ ಮಾಣಿಕ್ಯ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಎಸ್‍ಪಿಬಿ ಅವರ ನೆನಪು ಮಾಡಿಕೊಂಡರು. 

ಅವರು, ಇಂದು ಸಂಜೆ ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಸಿನಿಮಾ ಸಿರಿ ಸಂಸ್ಥೆ ವತಿಯಿಂದ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರ ಶ್ರದ್ಧಾಂಜಲಿ ಪ್ರಯುಕ್ತ ಹಮ್ಮಿಕೊಂಡಿದ್ದ ಎಸ್‍ಪಿಬಿ ಗೀತ ನಮನ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಎಸ್‍ಪಿಬಿ ಅವರು ನಗರಕ್ಕೆ ಆಗಮಿಸಿ ಒಡನಾಡಿಯಾಗಿದ್ದರಲ್ಲದೇ, ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಸಹಾಯಾರ್ಥವಾಗಿ ಕೊಟ್ಟಿದ್ದಾರೆ. ದಾವಣಗೆರೆಯಲ್ಲೂ ಅವರ ಸಂಗೀತದ ಸಿಂಚನ ಪಸರಿಸಿದೆ, ಇದನ್ನು ಮರೆಯುವಂತಿಲ್ಲ. ಅಂತಹ ಗಾನ ಕೋಗಿಲೆ ಕೊರೊನಾದಿಂದ ಗೆಲುವು ಸಾಧಿಸಿದರೂ ಕೊನೆಗೂ ಅವರು ಸ್ಮರಣೀಯರಾದರು ಎಂದು ಸ್ಮರಿಸಿದರು.

ಅವರ ವ್ಯಕ್ತಿತ್ವ ಮತ್ತು ಸುಮಧುರ ಕಂಠದಿಂದ ಸಾವಿರಾರು ಸಂಖ್ಯೆಯಲ್ಲಿ ದೇಶದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರು. ಇನ್ನಷ್ಟು ಕಾಲ ಇದ್ದಿದ್ದರೆ ಸಂಗೀತ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದ್ದರು. ಅವರು ಸಂಗೀತ ಲೋಕದ ಭೀಷ್ಮ ಎಂದು ಬಣ್ಣಿಸಿದರು. 

ಒಂದೇ ಮನಸ್ಸಿನ ಅವರ ಅಭಿಮಾನಿಗಳು ಇಲ್ಲಿ ಸೇರಿ ಅವರಿಗೆ ಗೀತ ನಮನ ಸಲ್ಲಿಸುತ್ತಿರುವುದು ಅವರ ಸಂಗೀತದ ಕೊಡುಗೆಗೆ ನೀಡುವ ಗೌರವ. ಎಸ್‍ಪಿಬಿ ಇಂದು ನಮ್ಮೊಂದಿಗೆ ಇಲ್ಲದಿರಬಹುದು ಆದರೆ, ಈ ಲೋಕ ಇರುವವರೆಗೂ ಅವರ ಹಾಡುಗಳು ಚಿರಸ್ಥಾಯಿಯಾಗಿ ಉಳಿಯಲಿವೆ ಎಂದು ತಿಳಿಸಿದರು.

 ಎಸ್‍ಪಿಬಿ ಅವರ ಮರಣ ಹಾಗೂ ದಾವಣಗೆರೆಯ ಪ್ರತಿಷ್ಠಿತ ಮನೆತನದ ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿದ್ದು ಬೇಸರ ತಂದಿದೆ. ಮುಂದೆ ಎಂದೂ ಇಂತಹ ಅಪಘಾತ, ಅನಾಹುತ ಸಂಭವಿಸದಿರಲೆಂದು ದೇವರಲ್ಲಿ ಪ್ರಾರ್ಥಿಸುವೆನೆಂದರು.

ಆರೈಕೆ ಆಸ್ಪತ್ರೆಯ ವೈದ್ಯ ಡಾ. ರವಿಕುಮಾರ್ ಮಾತನಾಡಿ, ರಸ್ತೆ ಸುರಕ್ಷತೆಯ ಕಾನೂನುಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಿದರೆ ಅಪಘಾತ ತಡೆಯಬಹುದಾಗಿದೆ. ರಸ್ತೆ ಸುರಕ್ಷತೆ ವಿಚಾರ ಸರ್ಕಾರ ಮತ್ತು ಪೊಲೀಸರ ಕರ್ತವ್ಯ ಅಷ್ಟೇ ಅಲ್ಲ, ನಾಗರಿಕರೂ ಸಹ ಅದನ್ನು ಪಾಲಿಸಬೇಕು. ನಂಬಿದ ಜೀವಗಳು ಇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಸ್ತೆಯಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬೇಕೆಂದರು.

 ಎಸ್‍ಪಿಬಿ ಅವರು ಸಂಗೀತ ಲೋಕದ ದಿಗ್ಗಜರಾಗಿದ್ದರು. ಅವರು ದಾವಣಗೆರೆಯಲ್ಲಿಯೇ ಪುನಃ ಹುಟ್ಟಿ ಬರಲೆಂದು ಭಾವುಕತೆಯಿಂದ ನುಡಿ ನಮನ ಸಲ್ಲಿಸಿದರು.

ಸಿನಿಮಾಸಿರಿ ಸಂಸ್ಥೆ ಅಧ್ಯಕ್ಷ ಟಿ.ಎಂ. ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಸ್. ನಾಗಪ್ರಕಾಶ್, ಸುರಭಿ ಶಿವಮೂರ್ತಿ, ಎಂ.ಜಿ. ಜಗದೀಶ್, ಹೆಚ್.ವಿ. ಮಂಜುನಾಥ ಸ್ವಾಮಿ ಸಾಲಿಗ್ರಾಮ ಗಣೇಶ ಶೆಣೈ ಇದ್ದರು. 

ಇದೇ ವೇಳೆ ಇತ್ತೀಚೆಗೆ ರಸ್ತೆ ದುರಂತದಲ್ಲಿ ದುರ್ಮರಣಕ್ಕೀಡಾದ ದಾವಣಗೆರೆಯ ವನಿತೆಯರಿಗೆ ಮರೆಯಲಾಗದ ಮಾಣಿಕ್ಯ ಶೀರ್ಷಿಕೆಯಡಿ ಮೇಣದ ಬೆಳಕು ಮೂಡಿಸಿ ಭಾವಪೂರ್ಣ ನಮನ ಸಲ್ಲಿಸಲಾಯಿತು. ಅಲ್ಲದೇ ಎಸ್‍ಪಿಬಿ ಅವರಿಗೂ ನಮನ ಸಲ್ಲಿಸಿ ಸ್ಮರಣೆ ಮಾಡಲಾಯಿತು.

ತಂಪಿನಲ್ಲಿ ಸಂಗೀತದ ಕಂಪು: ಎಸ್‍ಪಿಬಿ ಅವರ ಜನಪ್ರಿಯ ಆಯ್ದ ಗೀತೆಗಳನ್ನು ಭದ್ರಾವತಿಯ ತೃಪ್ತಿ ಮೆಲೋಡಿಸ್ ಕಲಾವಿದರು ಮತ್ತು ಸ್ಥಳೀಯ ಕಲಾವಿದರು ಹಾಡಿ ನೆರೆದಿದ್ದವರ ಮನರಂಜಿಸಿದರು. ಈ ಗೀತೆಗಳು ಎಸ್‍ಪಿಬಿ ಅವರ ನೆನಪಿಸಿದವಲ್ಲದೇ, ಸಂಜೆಯ ತಂಪಿನಲ್ಲಿ ಇಂಪು ನೀಡಿದವು.

ದಿಗ್ಗಜರ ಸಂಗಮ: ವೇದಿಕೆ ಮೇಲೆ ದಾವಣಗೆರೆ ಕಲಾವಿದ ಜೂನಿಯರ್ ವಿಷ್ಣುವರ್ಧನ್ ಪರಮೇಶ್ ಹಾಗೂ ಅಂಬರೀಷ್ ಪಾತ್ರದಲ್ಲಿದ್ದ ಮಂಜು ಅವರು ದಿಗ್ಗಜರು ಸಿನಿಮಾದ ಕುಚುಕು ಕುಚುಕು ನೀ ಚೆಡ್ಡಿ ದೋಸ್ತು ಕುಚುಕು ಗೀತೆಯನ್ನು ಹಾಡುತ್ತಾ ಇಬ್ಬರು ದಿಗ್ಗಜ್ಜರಂತೆ ನಟಿಸಿ, ಕುಚುಕು ಗೆಳೆಯರನ್ನು ವೇದಿಕೆ ಮೇಲೆ ತಂದರು.

Leave a Reply

Your email address will not be published.