ಪಶು-ಪಕ್ಷಿಗಳಿಗೆ ನೀರಿನಾಸರೆ ಕಲ್ಪಿಸಿದ ಯುವ ಪಡೆ

ಕೂಡ್ಲಿಗಿ, ಮಾ.10-  ಸಮೀಪದ ಗಜಾಪುರ ಕಾಡಿನಲ್ಲಿ ಬೇಸಿಗೆ ಬಂತೆಂದರೆ ಪ್ರತಿವರ್ಷ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ಇದೆ.

ಕಳೆದ 3 ವರ್ಷಗಳಿಂದ ಗಜಾಪುರ ಗ್ರಾಮದ ಸ್ಥಳೀಯ ಯುವಕರು ತಳವಾರ ಶಿವರಾಜ ಎನ್ನುವ ಯುವಕನ ನೇತೃತ್ವದಲ್ಲಿ ಬಾವಿಯಾಕಾರದ ಬಂಡೆಗಳ ಮೇಲೆ ಟ್ಯಾಂಕರ್ ಮೂಲಕ ನೀರು ತುಂಬಿಸಿ ಪ್ರಾಣಿ,ಪಕ್ಷಿಗಳು, ಜೀವಿ ಸಂಕುಲಕ್ಕೆ  ನೀರಿನ ದಾಹ ತಣಿಸಲು ಮುಂದಾಗುವ ಮೂಲಕ ಮಾದರಿಯಾಗಿದ್ದಾರೆ. 

ಗಜಾಪುರ ಸಮೀಪ ಸಹಸ್ರಾರು ಹೆಕ್ಟೇರ್ ಕಾದಿಟ್ಟ ಅರಣ್ಯವಿದ್ದು ಇಲ್ಲಿ ಕಾಡು ಹಂದಿ, ಮೊಲ,ಕರಡಿಗಳು  ಸೇರಿದಂತೆ ವಿವಿಧ ರೀತಿಯ ಸರಿಸೃಪಗಳು, ಪಕ್ಷಿಗಳು, ಪ್ರಾಣಿಗಳು ವಾಸವಾಗಿದ್ದು, ಬೇಸಿಗೆ ಬಂತೆಂದರೆ ಕಾಡಿನಲ್ಲಿ ಕುಡಿಯಲು ನೀರು ಸಿಗುವುದಿಲ್ಲ. ಇದನ್ನರಿತ ಗಜಾಪುರ ಗ್ರಾಮದ ಯುವಕರು ಹಾಗೂ ಬಾಲಕರು ಟ್ಯಾಂಕರ್ ಮೂಲಕ ನೀರನ್ನು ತಂದು ದೊಡ್ಡ ಹೊಂಡಗಳ ತರಹ ಇರುವ ಬಂಡೆಗಳ ಮೇಲೆ ನೀರನ್ನು ತುಂಬಿಸುವ ಮೂಲಕ ಪ್ರಾಣಿ, ಪಕ್ಷಿಗಳ ದಾಹ ತಣಿಸುವ ಕೆಲಸ ಮಾಡುತ್ತಿದ್ದಾರೆ.

ಟ್ಯಾಂಕರ್ ನೀರಿಗೆ ಆಗುವ ಖರ್ಚನ್ನು ಯುವಕರೇ ಭರಿಸುತ್ತಿದ್ದು, ಊರ ಮುಖಂಡರು ಸಹ ಖರ್ಚು ನೀಡುವ ಮೂಲಕ ಯುವಕರ ಕೆಲಸಕ್ಕೆ ಬೆನ್ನು ತಟ್ಟುತ್ತಿದ್ದಾರೆ. ಬಂಡೆಯ ಮೇಲೆ ನೀರು ಖಾಲಿ ಆದ ತಕ್ಷಣ ಮತ್ತೊಂದು ಟ್ಯಾಂಕರ್ ನೀರು ತಂದು ತುಂಬಿಸುತ್ತಾರೆ.   ಮಳೆಬರುವವರೆಗೂ ಈ ರೀತಿಯ ವನ್ಯಜೀವಿಗಳ ಬಗ್ಗೆ ಕಾಳಜಿ ಮೆರೆಯುವ ಯುವಕರು ಇತರರಿಗೆ ಮಾದರಿಯಾಗಿದ್ದಾರೆ. 

ಹಿಂದಿನ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ರೇಣುಕಾ ಅವರ ಕಟ್ಟುನಿಟ್ಟಿನ ಕ್ರಮದಿಂದ ಅರಣ್ಯ ಅಭಿವೃದ್ಧಿ ಹೊಂದಿದ್ದು, ಕಾಡು ಪ್ರಾಣಿಗಳು ಸಹ ಹೆಚ್ಚಾಗಿವೆ. ಗಜಾಪುರ ಸಮೀಪದ ಕಾಡಿನಲ್ಲಿ  ಅಂಕನ ಡೋಣಿ ಎಂಬ ಬಂಡೆಯ ಮೇಲೆ 5 ರಿಂದ 6 ಚಿಕ್ಕ ಚಿಕ್ಕ ಡೋಣಿಯಾಕಾರದ ಬಾವಿಗಳಿವೆ. ಈ ಬಂಡೆಯ ಮೇಲಿನ ತಗ್ಗುಗಳಲ್ಲಿ  ಒಂದು ಟ್ಯಾಂಕರ್ ನೀರು ತುಂಬಬಹುದು. ಈ ನೀರು 10 ರಿಂದ 15 ದಿನಗಳವರೆಗೆ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಗುತ್ತದೆ. ನಂತರ ನೀರು ಖಾಲಿಯಾಗುವುದನ್ನು ಆಗಾಗ್ಗೆ ಗಮನಿಸುತ್ತಿ ರುವ  ಶಿವರಾಜ ಮತ್ತು ತಂಡದವರು  ಟ್ಯಾಂಕರ್ ಮೂಲಕ ನೀರು ತುಂಬಿಸಿ ನೀರು ಖಾಲಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. 

ತಳವಾರ ಶಿವರಾಜ ಅವರ ಜೊತೆಗೆ ಯುವಕರಾದ ಅಂಗಡಿ ಕೊಟ್ಟಪ್ಪ, ನಾಣ್ಯಾಪುರ ಮಾರುತಿ, ಕಾಳಾಪುರ ಪವನ್, ಬಣಕಾರ ಗುರುವಪ್ಪ, ವಿದ್ಯಾರ್ಥಿಗಳಾದ
ಡಿ. ಮಾರುತಿ, ತುಪ್ಪಾನಹಳ್ಳಿ ಮಾರುತಿ,
ಕೆ. ಮಾರುತಿ, ಕೊಟ್ರೇಶ್ ಕೈ ಜೋಡಿಸಿದ್ದಾರೆ. ಜೊತೆಗೆ ಊರ ಮುಖಂಡರು ಸಹ ಸ್ಪಂದಿಸುತ್ತಿರುವುದು ವಿಶೇಷ. 

ಕಳೆದ ಮೂರು ವರ್ಷಗಳಿಂದ ತಗ್ಗಿರುವ ಬಂಡೆಗಳಿಗೆ  ನೀರು ತುಂಬುವ ಮೂಲಕ ಪ್ರಾಣಿ, ಪಕ್ಷಿಗಳಿಗೆ ನೀರನ್ನು ಪೂರೈಕೆ ಮಾಡುತ್ತೇವೆ. ನಮ್ಮಂತೆ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಇದನ್ನರಿತು ನಾವು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಮೂರು ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ ನೀರು ಸರಬರಾಜು ಮಾಡುತ್ತಿರುವ ಗಜಾಪುರ ಗ್ರಾಮದ ಯುವಕ ತಳವಾರ ಶಿವರಾಜ. 

ನಮ್ಮೂರಿನಲ್ಲಿ ಯುವಕರ ಈ ಕೆಲಸ ಹೆಮ್ಮೆ ತಂದಿದೆ. ನಾವು ಕೂಡ ಪ್ರತಿವರ್ಷ ಟ್ಯಾಂಕರ್ ನೀರಿನ ಖರ್ಚನ್ನು ನೀಡುವ ಮೂಲಕ ಯುವಕರಿಗೆ ಸ್ಫೂರ್ತಿ ನೀಡುತ್ತಿದ್ದೇವೆ ಎನ್ನುತ್ತಾರೆ ಗಜಾಪುರ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ್.


ಮಂಜು ಮಯೂರ,
manjumayura1987@gmail.com