ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ

ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ

ಹೂವಿನಹಡಗಲಿ, ಮಾ. 6- ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಶಿಷ್ಟಾಚಾರ, ಶಿಸ್ತು, ಸಮಯಪ್ರಜ್ಞೆ ಮುಂತಾದ ಸುಸಂಸ್ಕೃತಿಯ ಜೀವನ ರೂಪಿಸುವಲ್ಲಿ ಪೋಷಕರು ಮೊದಲು ಅನುಸರಿಸಿ ಪಾಲಿಸಿದಾಗ ಅದಕ್ಕೆ ನೈತಿಕತೆ ಇರುತ್ತದೆ. ಪೋಷಕರೇ ಅಡ್ಡದಾರಿ ಹಿಡಿದರೆ ಮಕ್ಕಳ ಜೀವನ ಬೀದಿ ಪಾಲಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜ ಸುಧಾರಣೆಗೆ, ಮನೆ, ಮನೆತನದ ಘನತೆ, ಗೌರವ ಹೆಚ್ಚಿಸುವಲ್ಲಿ ಮಹಿಳೆಯ ಪಾತ್ರ ಅಗ್ರಮಾನ್ಯ ಎಂದು ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿ’ಸೌಜ ತಿಳಿಸಿದರು.

ಅವರು ಗದಗ ಜಿಲ್ಲೆ ಮುಂಡರಗಿಯ ಈಶ್ವರಿ ಮಹಿಳಾ ಫೌಂಡೇಷನ್ ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಶ್ರೀ ಗವಿಮಠದ ಸಹಯೋಗದಲ್ಲಿ ಈಚೆಗೆ ಹಡಗಲಿ ಶ್ರೀ ಗವಿಮಠದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ಮಹಿಳಾ ಮಹಾ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

`ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು’ ಎಂಬ ನಾಣ್ಣುಡಿಯಂತೆ ಎಲ್ಲ ಗುರು ತರವಾದ ಜವಾಬ್ದಾರಿಯನ್ನು ಮಹಿಳೆ ತಾಳ್ಮೆಯಿಂದ ವಿಶಾಲ ಸೇವಾ ಮನೋಭಾವನೆಯಿಂದ ನಿಸ್ವಾರ್ಥದಿಂದ, ಬದ್ಧತೆಯಿಂದ ಮೈಗೂಡಿಸಿಕೊಂಡು ಮುನ್ನಡೆದರೆ ಮನೆ, ಮನೆತನ ಸನ್ಮಾರ್ಗದಲ್ಲಿ ಸುಸಂಪನ್ನ ಗೊಳ್ಳುತ್ತದೆ ಎಂದು ಜಸ್ಟಿನ್ ಡಿ’ಸೌಜ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ, ಇಟಗಿ ಶ್ರೀ ಶಾಂತಮಠದ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‍ಶೆಣೈ ಸಮಾರಂಭ ಉದ್ಘಾಟಿಸಿದರು.

ದಾವಣಗೆರೆಯ ಹಿರಿಯ ಸ್ತ್ರೀರೋಗ ತಜ್ಞೆ, ಪರಿಸರವಾದಿ ಶ್ರೀಮತಿ ಡಾ. ಶಾಂತಾ ಭಟ್‌ ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾವತಿ ಹಿರಿಮಠ ಪ್ರಾರ್ಥಿಸಿದರು.  ಲೀಲಾ ಉಮಚಗಿ ಸ್ವಾಗತಿಸಿದರು. ಈಶ್ವರಿ ಮಹಿಳಾ ಫೌಂಡೇಷನ್ ಸಂಸ್ಥಾಪಕರಾದ ಶ್ರೀಮತಿ ಪ್ರಭಾವತಿ ವಿಶ್ವನಾಥ್ ಬೆಳವಣಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಕುಂಬಾರ್ ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹೇಮಾ ಪಿ. ಅರಿಶಿಣದ ವಂದಿಸಿದರು.

Leave a Reply

Your email address will not be published.