ಸಂವಿಧಾನ ಮಾತ್ರ ಗೋರ್ ಧರ್ಮವನ್ನು ಉಳಿಸಬಲ್ಲದು

ಸಂವಿಧಾನ ಮಾತ್ರ ಗೋರ್ ಧರ್ಮವನ್ನು ಉಳಿಸಬಲ್ಲದು

ಸಂತ ಸೇವಾಲಾಲ್ ಜಯಂತಿಯಲ್ಲಿ ಅನಂತ ನಾಯ್ಕ್ ಅಭಿಮತ

ಕೂಡ್ಲಿಗಿ, ಮಾ.6-  ಧಾರ್ಮಿಕ ಮೂಲಭೂತವಾದದ ವಿಕಾರತೆ ಮತ್ತು ಆರ್ಥಿಕತೆಯ ಅರಾಜಕತೆ ಸಮಾಜದಲ್ಲಿ ಮತ್ತಷ್ಟು ಅಸಮಾನತೆಯನ್ನು ಬಿತ್ತುತ್ತಿದೆ. ಬಂಜಾರರ ಬಹು ಸಂಸ್ಕೃತಿಯನ್ನು ನಾಶಪಡಿಸುತ್ತಿದೆ. ಸಂವಿಧಾನ ಮಾತ್ರ ಗೋರ್ ಧರ್ಮವನ್ನು ಉಳಿಸಬಲ್ಲದು ಎಂದು ಹೈಕೋರ್ಟ್ ನ್ಯಾಯವಾದಿ  ಅನಂತನಾಯ್ಕ್‌ ಕಿವಿಮಾತು ಹೇಳಿದರು. 

ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ತಾಲ್ಲೂಕು ಸೇವಾಲಾಲ್ ಸಂಘಟನೆಯಿಂದ  ಆಯೋಜಿಸಿದ್ದ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಉಳಿಯದೆ, ಜನ ಸಂಸ್ಕೃತಿ ಉಳಿಯದು. ಮೂಲ ನಿವಾಸಿ ಸಮುದಾಯಗಳ ಭಾಷೆ ಮತ್ತು ಚರಿತ್ರೆಯನ್ನು ದಾಖಲಿಸುವಲ್ಲಿ ಇತಿಹಾಸಕಾರರು ಪಕ್ಷಪಾತಿಗಳಾಗಿದ್ದಾರೆ.  ಇಂದಿಗೂ ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಿಲ್ಲ. ಬಡತನದಿಂದಾಗಿ ಮಕ್ಕಳ ಮಾರಾಟದಂತಹ ಪಿಡುಗು ಇವತ್ತಿಗೂ ಸಮಾಜವನ್ನು ಕಾಡುತ್ತಿದ್ದೆ. ರಾಜ್ಯದ ಅತಿ ಹೆಚ್ಚು ಅಪೌಷ್ಟಿಕತೆಯ ಮಕ್ಕಳು ತಾಂಡಾಗಳಲ್ಲಿ ಸಿಗುತ್ತಾರೆ.‌ ಪ್ಲೋರೈಡ್ ಅಂಶ ತುಂಬಿದ ನೀರಿನ ಕಾರಣದಿಂದಾಗಿ ತಾಂಡಾಗಳಲ್ಲಿ ಅನಾರೋಗ್ಯ ಕಾಡುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಲಂಬಾಣಿ ಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡಲಿ ಎಂದರು.

 ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗು ಇತರರು ಕೊಟ್ಟಿರುವ ಸಾಮಾಜಿಕ ನ್ಯಾಯದ ಪಥದಲ್ಲಿ ಹಿಂದುಳಿದ, ಪರಿಶಿಷ್ಟ ಸಮುದಾಯಗಳು ಸಾಗಬೇಕಿದೆ. ಬಂಜಾರರಿಗೆ ಸೇವಾಲಾಲ್ ಕಣ್ಣು, ಅಂಬೇಡ್ಕರ್ ಮಿದುಳು ಇದ್ದಂತೆ. ಹಾಗಾಗಿ ಸೇವಾಲಾಲ್, ಮೀಟೂಭೂಕ್ಯ, ನಾನು ಸಾಧ್, ಬುದ್ದ, ಬಸವ, ಅಂಬೇಡ್ಕರ್ ರಂತಹ ಸುಧಾರಕರ ಜೀವನವನ್ನು ಅಧ್ಯಯನ ಮಾಡಲು ಮುಂದಾಗೋಣ. ಆ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಮುಂದಾಗೋಣ ಎಂದರು.

 ಶ್ರೀ ಬಾಲಕೖಷ್ಣ ಮಹಾರಾಜ, ಶಿವಪ್ರಕಾಶ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಎಸ್.ಆರ್. ಶ್ಯಾಮನಾಯ್ಕ, ತಾ.ಪಂ. ಮಾಜಿ ಅಧ್ಯಕ್ಷ ಬಿ. ವೆಂಕಟೇಶನಾಯ್ಕ,  ಗೌರವಾಧ್ಯಕ್ಷ ಎಂ.ವಿ. ಪ್ರಕಾಶ ನಾಯ್ಕ, ಲಾಲ್ ಸಿಂಗ್ ನಾಯ್ಕ, ಕಾರ್ಯಾಧ್ಯಕ್ಷ ವಿಜಯಕುಮಾರ ನಾಯ್ಕ, ಖಜಾಂಚಿ ವಾಸುದೇವ ನಾಯ್ಕ, ಅಖಿಲ ಕರ್ನಾಟಕ ಬಂಜಾರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಟಿ. ನಾಗರಾಜ, ವೆಂಕಟೇಶ ಬಂಜಾರ, ಬಂಜಾರ ಕ್ರಾಂತಿ ಸಂಘದ ಅಧ್ಯಕ್ಷ ವಿಜಯ ಜಾಧವ್, ಜಿಲ್ಲಾ ನ್ಯಾಯಾಲಯದ ಎಡಿಎಪಿಪಿ ನಾನೂಸಾದ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶಾರದಾಬಾಯಿ, ವಿಜಯನಗರ ಜಿಲ್ಲಾ ಬಂಜಾರ ಸೇವಾ ಸಂಘದ ಅಧ್ಯಕ್ಷ ರಾಮ್‌ಜೀ ನಾಯ್ಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿವಪುರ ಗ್ರಾ.ಪಂ. ಅಧ್ಯಕ್ಷೆ ವೀರಮ್ಮ ರತ್ನನಾಯ್ಕ, ಸಹ ಖಜಾಂಚಿ ವೆಂಕಟೇಶ ನಾಯ್ಕ, ಕಾನೂನು ಸಲಹೆಗಾರರಾದ ಮಾಲಾ ಧರ್ಮನಾಯ್ಕ, ಪಂಕಜಾಬಾಯಿ ಸಂಘಟನೆಯ ಪದಾಧಿಕಾರಿಗಳು, 17 ತಾಂಡಾಗಳ ನಾಯಕ, ದಾವೋ, ಕಾರ್‌ಬಾರಿಗಳು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.