ಆಶ್ರಯ ಮನೆಗಳ ತೆರವಿನ ಕಿರುಕುಳ: ಸೂರು ಉಳಿಸಲು ಮನವಿ

ಆಶ್ರಯ ಮನೆಗಳ ತೆರವಿನ ಕಿರುಕುಳ: ಸೂರು ಉಳಿಸಲು ಮನವಿ

ದಾವಣಗೆರೆ, ಮಾ.6- ಸರ್ಕಾರದಿಂದ ನೀಡಲಾದ ಆಶ್ರಯ ಮನೆಗಳನ್ನು ತೆರವುಗೊಳಿಸುವುದಾಗಿ ಭೂಮಿ ನೀಡಿದ್ದ ಖಾಸಗಿ ವ್ಯಕ್ತಿಯು ಕಿರುಕುಳ ನೀಡುತ್ತಿದ್ದು, ನಮಗೆ ಆಶ್ರಯ ಮನೆ ಉಳಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿಂದು ಹರಿಹರ ತಾಲ್ಲೂಕಿನ ಮಳಲಹಳ್ಳಿ ಗ್ರಾಮದ ಫಲಾನುಭವಿಗಳು ಉಪವಿಭಾಗಾಧಿಕಾರಿ ಮೊರೆ ಹೋದರು.

ಗ್ರಾಮದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ವಾಸವಿರುವ ಆಶ್ರಯ ಮನೆಗಳನ್ನು ತೆರವುಗೊಳಿಸಿದರೆ ಸೂರಿಲ್ಲದ ನಾವುಗಳು ಬೀದಿಗೆ ಬರಬೇಕಾಗಲಿದೆ ಎಂದು ಕಣ್ಣೀರಿಟ್ಟರು.

ಎಳೆಹೊಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಮಳಲಹಳ್ಳಿ ಗ್ರಾಮದಲ್ಲಿ 1974-75ನೇ ಸಾಲಿನಲ್ಲಿ 1 ಎಕರೆ 5 ಗುಂಟೆ ಜಮೀನನ್ನು ಆಶ್ರಯ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡು ಸರ್ಕಾರವು ನಿವೇಶನ ರಹಿತ 33 ಫಲಾನುಭವಿಗಳಿಗೆ ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ನೀಡಿ ಆಶ್ರಯ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಡಲಾಗಿದೆ. ಆದರೆ, ಈಗ ಜಮೀನು ಮಾಲೀಕ ಎಳೆಹೊಳೆ ಗ್ರಾಮದ ಎಂ. ಓಂಕಾಪ್ಪ ಮತ್ತು ಸಹೋದರರು ನ್ಯಾಯಾಲಯಕ್ಕೆ ದೂರು ಕೊಟ್ಟು, ಈಗ ನಮ್ಮ ಮನೆಗಳನ್ನು ತೆರವುಗೊಳಿಸಲು ಆದೇಶ ತಂದಿದ್ದು, ಪದೇ ಪದೇ ಮನೆಗಳನ್ನು ಖಾಲಿ ಮಾಡುವಂತೆ ಕಿರುಕುಳ ಕೊಡುತ್ತಿದ್ದಾರೆ ಎಂದು ಅಳಲಿಟ್ಟರು. ನಮಗೆ ತಕ್ಕ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೇವಿನಹಳ್ಳಿ ಮಹೇಶ್, ಎಸ್. ಗದಿಗೆಪ್ಪ, ಮಮತಾ, ಗುತ್ತೆಮ್ಮ, ಗಿರಿಯಪ್ಪ, ಮಲ್ಲಮ್ಮ, ಭಾಗ್ಯಮ್ಮ, ಯಲ್ಲಮ್ಮ ಸೇರಿದಂತೆ ಆಶ್ರಯ ಮನೆ ಫಲಾನುಭವಿಗಳು ಇದ್ದರು.

ಭರವಸೆ: ಗ್ರಾಮಸ್ಥರ ಅಹವಾಲು ಆಲಿಸಿದ ಮಮತಾ ಹೊಸಗೌಡರ್, ನಿಮ್ಮ ಗ್ರಾಮದಲ್ಲಿ ಸರ್ಕಾರ ಜಾಗ ಪಡೆದು ನಿರ್ಮಿಸಿರುವ ಆಶ್ರಯ ಮನೆಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ. ನೀವು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಪಹಣಿಯಲ್ಲಿ ಆಶ್ರಯ ಮನೆ ಜಾಗವೆಂದಿದೆ. ಈ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ, ಸೂಕ್ತ ನ್ಯಾಯ ಕೊಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ವಿಚಾರವಾಗಿ ಸ್ಪಷ್ಟ ಮಾಹಿತಿ ನನಗಿಲ್ಲ. ನನಗೀಗ ದೊರೆತ ಮಾಹಿತಿ ಪ್ರಕಾರ ಜಮೀನಿನ ಮಾಲೀಕ ತನ್ನ 12 ಎಕರೆ 20 ಗುಂಟೆ ಪೈಕಿ 1 ಎಕರೆಯನ್ನು ಆಶ್ರಯ ಮನೆಗೆ ನೀಡಿರುವುದು ತಿಳಿದಿದ್ದು, ತನ್ನ 11 ಎಕರೆ 20 ಗುಂಟೆಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿರುವುದಾಗಿ ಜಮೀನು ಮಾಲೀಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಸಮಗ್ರ ಮಾಹಿತಿ ಸಂಗ್ರಹಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a Reply

Your email address will not be published.