ಜನತಾವಾಣಿ ಕಚೇರಿಗೆ ಮೇಯರ್ ವೀರೇಶ್ ಭೇಟಿ

ಜನತಾವಾಣಿ ಕಚೇರಿಗೆ ಮೇಯರ್ ವೀರೇಶ್ ಭೇಟಿ

ಸಂಪಾದಕ ಎಂ.ಎಸ್. ವಿಕಾಸ್ ಅವರಿಂದ ಅಭಿನಂದನೆ

ದಾವಣಗೆರೆ, ಮಾ.2- ಮಹಾನಗರ ಪಾಲಿಕೆಯ ನೂತನ ಮೇಯರ್ ಎಸ್.ಟಿ. ವೀರೇಶ್ `ಜನತಾವಾಣಿ’ ಕಾರ್ಯಾಲಯಕ್ಕೆ ಮಂಗಳವಾರ ಸೌಜನ್ಯಯುತ ಭೇಟಿ ನೀಡಿದ್ದರು.

ಸಂಪಾದಕ ಎಂ.ಎಸ್. ವಿಕಾಸ್ ಅವರು ವೀರೇಶ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿದರು. 

ಈ ವೇಳೆ ತಮ್ಮ ಆಡಳಿತಾವಧಿಯಲ್ಲಿ ಮಾಡಬೇಕಾದ ಜನಪರ ಯೋಜನೆಗಳ ಬಗ್ಗೆ ಹಂಚಿಕೊಂಡ ವೀರೇಶ್, `ಸ್ವಚ್ಛ ಮಂಗಳೂರು’ ಮಾದರಿಯಲ್ಲಿ ದಾವಣಗೆರೆಯಲ್ಲೂ ಸುಮಾರು 40ಕ್ಕೂ ಹೆಚ್ಚು ಸಂಘಟನೆಗಳನ್ನು ಒಗ್ಗೂಡಿಸಿ, ಪ್ರತಿ ಭಾನುವಾರ ಒಂದೊಂದು ವಾರ್ಡುಗಳನ್ನು ಸ್ವಚ್ಛಗೊಳಿಸುವ ಚಿಂತನೆ ಇದೆ ಎಂದರು.

ಕಸದ ಮಹತ್ವ ಅರಿತವರಿಗೆ ಅದು ಬಂಗಾರವಾಗಿರುತ್ತದೆ. ಸಾರ್ವಜನಿಕರು ಮನೆಯಲ್ಲಿಯೇ ಕಸವನ್ನು ವಿಂಗಡಣೆ ಮಾಡಿ ಪಾಲಿಕೆ ವಾಹನಗಳಿಗೆ ಕೊಡುವುದು ಒಳಿತು. ಕಸ ನಿರ್ವಹಣೆ ಹಾಗೂ ನಗರಾಭಿವೃದ್ಧಿ ಬಗ್ಗೆ ಸಲಹೆಗಳನ್ನು ಪಡೆಯಲು ಚಿಂತಕರ, ಸಂಘ-ಸಂಸ್ಥೆಗಳ ಮುಖಂಡರ ಸಭೆ ಕರೆಯುವುದಾಗಿ ಹೇಳಿದರು.

ಡಿಸಿಎಂ ಲೇ ಔಟ್‌ನಲ್ಲಿರುವ ಯಾವುದಾದ ರೊಂದು ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣ, ಅಂತರ್ಜಲ ಹೆಚ್ಚಳಕ್ಕೆ ನಗರದ 150 ಕಡೆ ಇಂಗು ಗುಂಡಿಗಳನ್ನು ನಿರ್ಮಾಣ. ಹಾಗೂ ನಗರದಲ್ಲಿ ಸುಮಾರು 200 ಉದ್ಯಾನವನಗಳ ಪೈಕಿ 50 ಕಡೆ  ಅರ್ಬನ್ ಫಾರೆಸ್ಟ್ ನಿರ್ಮಿಸುವ ಕನಸು ಹೊಂದಿದ್ದೇನೆ. ಅಲ್ಲಿ ಪಕ್ಷಿಗಳು ಗೂಡು ಕಟ್ಟಲು ಸಹಕಾರಿಯಾಗುವಂತಹ ಮರಗಳನ್ನು ಬೆಳೆಸುವ ಆಲೋಚನೆ ಇದೆ  ಎಂದು ಹೇಳಿದರು.

ಕಸ ತುಂಬಿಕೊಂಡ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಂದಲೇ ಹಣ ವಸೂಲಿ ಮಾಡುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಖರ್ಚಿನ ವೆಚ್ಚ ಹೆಚ್ಚಾದರೆ ಸೈಟನ್ನು ಹರಾಜು ಮಾಡಿ ಪಾಲಿಕೆ ಹಣ ತುಂಬಿಕೊಳ್ಳಲು ಸಾಧ್ಯವಾಗುವಂತಹ ಕಠಿಣ ಕಾನೂನು ಇರುವುದಾಗಿ ವೀರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಸಭೆಗಳಲ್ಲಿ ಮಹಾನಗರ ಪಾಲಿಕೆಯಲ್ಲಿ ಮುಕ್ತ ಅವಕಾಶಗಳಿರಲಿಲ್ಲ. ಈ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಕಾಮಗಾರಿಗಳನ್ನು ನಡೆಸುವ ವೇಳೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಇಲ್ಲದೇ ಇರುವುದು ದೊಡ್ಡ ದುರಂತ. ಮುಂದಿನ ದಿನಗಳಲ್ಲಿ ಪಾಲಿಕೆಯೊಂದಿಗೆ ವಿವಿಧ ಇಲಾಖೆಗಳ ಸಮನ್ವಯತೆ ಕಾಯ್ದುಕೊಳ್ಳಲಾ ಗುವುದು ಎಂದರು.

ಸ್ಮಾರ್ಟ್ ಸಿಟಿಯ ಕೆಲ ಯೋಜನೆಗಳು ಯಶ ಕಾಣದೇ ಇರುವ ಹಾಗೂ ನಿರ್ವಹಣಾ ದೋಷಗಳ ಬಗ್ಗೆ ಪ್ರಸ್ತಾಪಿಸಿ ದಾಗ, ಇ-ಟಾಯ್ಲೆಟ್ ನಿರ್ವಹಣೆಯಲ್ಲಿ ಹೆಚ್ಚಿನ ಆರೋಪ ಗಳು ಕೇಳಿ ಬಂದ ಕಾರಣ, ಸದ್ಯಕ್ಕೆ ಮತ್ತಷ್ಟು ಹೊಸ ಇ-ಟಾಯ್ಲೆಟ್ ನಿರ್ಮಾಣಕ್ಕೆ ತಡೆ ನೀಡಲಾಗಿದೆ ಎಂದರು.

ಶಶಿಧರ ಹೆಮ್ಮನ ಬೇತೂರು, ಶ್ರೀನಿವಾಸ ಮೆಳ್ಳೇಕಟ್ಟೆ, ಸತೀಶ್ ಸಿರಿಗೆರೆ, ಅಶೋಕ್ ಹೊನ್ನಾಯ್ಕನಹಳ್ಳಿ ಉಪಸ್ಥಿತರಿದ್ದರು.