ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?

ದಾವಣಗೆರೆ ಯೋಜನಾ ಬದ್ಧವಾಗಿ ಬೆಳೆದು ಬಂದ ನಗರವಾಗಿದ್ದು, ಸ್ಥಳ ದಾನ ಮತ್ತು ಧನ ಸಹಾಯ ಮಾಡಿ ಶಿಕ್ಷಣ ಕ್ಷೇತ್ರವನ್ನು ಬೆಳೆಸಿರುವ ನಿದರ್ಶನಗಳು ನಮ್ಮ ಕಣ್ಮುಂದೆ ಇರುವಾಗ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ವಸತಿಗೃಹಗಳನ್ನು ಕಟ್ಟುವ ಮಹದಾಸೆ ಜಿಲ್ಲಾಧಿಕಾರಿಗಳಿಗೆ ಏಕೆ ಹುಟ್ಟಿತೋ ತಿಳಿಯದು. 

ಕರ್ನಾಟಕಲ್ಲಿ ಪ್ರಪ್ರಥಮವಾಗಿ 1964 ರಲ್ಲಿ ಸರ್ಕಾರಿ ಕಲಾ ಶಾಲೆಯಾಗಿ ಪ್ರಾರಂಭವಾಗಿ, ನಂತರ ಪದವಿ ಮಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಯಿತು. ಪ್ರಸಕ್ತ ದಾವಣಗೆರೆ ವಿಶ್ವವಿದ್ಯಾಲಯದ ಒಂದು ಪ್ರತಿಷ್ಠಿತ ದೃಶ್ಯಕಲಾ ಮಹಾ ವಿದ್ಯಾಲಯವಾಗಿ, ದೃಶ್ಯಕಲಾ ಶಿಕ್ಷಣದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಕೇವಲ ಪದವಿ ಮಾತ್ರವಲ್ಲದೆ ಸ್ನಾತಕೋತ್ತರ ಮತ್ತು ಸಂಶೋಧನಾ ಶಿಕ್ಷಣ ಕೇಂದ್ರವಾಗಿ ಪ್ರಗತಿಯಲ್ಲಿರುವುದು ಸಂತಸದ ಸಂಗತಿ.

ಜಿಲ್ಲಾಧಿಕಾರಿಗಳಿಗೆ ಇದರ ಮಹತ್ವ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರದ ಅಧೀನ ಕಾರ್ಯದರ್ಶಿಗಳು ಕಂದಾಯ ಇಲಾಖೆಯಿಂದ ವಿಶ್ವವಿದ್ಯಾನಿಲಯದ ಗಮನಕ್ಕೆ ತರದೇ 04 ಎಕರೆ 31 ಗುಂಟೆ ಜಾಗವನ್ನು ಜಿಲ್ಲಾಮಟ್ಟದ ಅಧಿಕಾರಿಗಳ ವಸತಿ ಗೃಹಕ್ಕೆ ಕಾಯ್ದಿರಿಸಿ ಆದೇಶವನ್ನು ಹೊತ್ತು ತಂದಿರುವುದು ದಾವಣಗೆರೆ ಶಿಕ್ಷಣ ಕ್ಷೇತ್ರಕ್ಕೆ ಮಸಿ ಬಳೆದಂತಾಗಿದೆ. 

ಅಂದಿನ ಸರ್ಕಾರ ದೂರದೃಷ್ಟಿಯನ್ನಿಟ್ಟುಕೊಂಡು ಅವಶ್ಯಕತೆ ಗಳಿಗನುಸಾರ 22 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿ ಪ್ರೋತ್ಸಾಹಿಸಿದೆ. ಹಂತ ಹಂತವಾಗಿ ಅನುದಾನಗಳು ಲಭ್ಯವಾದಂತೆ ಕಲಾ ಶಾಲೆ ಆವರಣದಲ್ಲಿ ವಿವಿಧ ಕಟ್ಟಡಗಳು ನಿರ್ಮಾಣವಾಗಿರುತ್ತವೆ. ಉಳಿದ ವಿಶಾಲವಾದ ಪ್ರದೇಶದಲ್ಲಿ ಸಮಗ್ರ ಯೋಜನೆಯಡಿ ಶೈಕ್ಷಣಿಕ ಕಟ್ಟಡಗಳು, ವಿದ್ಯಾರ್ಥಿನಿಲಯಗಳು ಮತ್ತು ಕಲಾವಿದರ ಸಂಶೋಧನಾ ವಿಭಾಗಗಳನ್ನು ನಿರ್ಮಿಸಲು ನಿರ್ದಿಷ್ಟವಾಗಿ ಕಾಯ್ದಿರಿಸಲಾಗಿದೆ. 

ಹಿಂದೆ ದಾವಣಗೆರೆ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿತ್ತು. ಸರ್ಕಾರಿ ಮಹಿಳಾ ಪದವಿ ಕಾಲೇಜು, ಸೀತಮ್ಮ ಪ್ರೌಢಶಾಲೆಯಲ್ಲಿ ನಡೆಯುತ್ತಿತ್ತು, ಇದನ್ನು ಆಗಿನ ಸಚಿವರಾಗಿದ್ದ ಎಸ್.ಎ. ರವೀಂದ್ರನಾಥ್‌ ಅವರು, ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ|| ಶಿವಯೋಗಿಸ್ವಾಮಿ ಯವರು, ಬಿಡಿಟಿ ಕಾಲೇಜು ಪಕ್ಕದಲ್ಲಿರುವ ಪುಟ್ಟ ಜಾಗದಲ್ಲಿ ಕಾಲೇಜು ನಿರ್ಮಿಸಿದ್ದರು. ಹಾಗೆಯೇ ಲಲಿತಕಲಾ ಕಾಲೇಜು ಆವರಣದಲ್ಲಿ ಸರ್ಕಾರಿ ಪದವಿ ಕಾಲೇಜು ನಿರ್ಮಿಸಲು ಅವಕಾಶ ಮಾಡಿಕೊಟ್ಟರು. ಇದರಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಂತಾಗಿದೆ. 

ಹಾಗೆ ನೋಡಿದರೆ ಜಿಲ್ಲಾಧಿಕಾರಿಗಳು ಸರ್ಕಾರಿ ಕಾಲೇಜುಗಳಿಗೆ ಕನಿಷ್ಠ 4-5 ಎಕರೆ ಜಮೀನನ್ನು ನೀಡಿ ಕರ್ತವ್ಯವನ್ನು ಮೆರೆಯಬೇಕಾಗಿತ್ತು. ಇದೇ ಲಲಿತಕಲಾ ಕಾಲೇಜು ಆವರಣದ 22 ಎಕರೆ ಜಮೀನಿನಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಜೊತೆಯಲ್ಲಿ, ಕನ್ನಡ ಭವನ ಮತ್ತು ಬಿಡಿಟಿ ಇಂಜಿನಿಯರಿಂಗ್ ಕಾಲೇಜ್,  ಮಹಿಳಾ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣವಾಗಿರುತ್ತವೆ. ಆದರೆ ಇವೆಲ್ಲವೂ ಶಿಕ್ಷಣ, ಕಲೆ, ಮತ್ತು ಸಂಸ್ಕೃತಿಗೆ ಸಂಬಂಧಿಸಿರುವುದು ಸಮಾಧಾನಕರ ಸಂಗತಿ. 

ಲಲಿತ ಕಲಾ ಕಾಲೇಜು ಆವರಣದ ಮೇಲೆ ಕಣ್ಣಿರುವುದು ಇದೇ ಮೊದಲಲ್ಲ ಅನಿಲ್‌ ಕುಮಾರ್ ಅವರು ಜಿಲ್ಲಾಧಿಕಾರಿಗಳಾಗಿದ್ದಾಗ ಅವರು ಕೂಡ ವಸತಿ ಗೃಹ ನಿರ್ಮಾಣದ ಪ್ರಸ್ತಾವನೆ ತಂದಿದ್ದರು. ಆದರೆ ಇದನ್ನು ವಿರೋಧಿಸಿ ಕುವೆಂಪು ವಿಶ್ವವಿದ್ಯಾಲಯ ಸೆನೆಟ್, ಸಿಂಡಿಕೇಟ್ ಸದಸ್ಯರು ಹೋರಾಟಕ್ಕಿಳಿದ ಪರಿಣಾಮ ವಸತಿ ಗೃಹಗಳ ನಿರ್ಮಾಣಕ್ಕೆ ತಡೆ ಹಿಡಿಯಲಾಯಿತು. ಕೋರ್ಟ್ ಆದೇಶವು ಕೂಡ ಇದೇ ಆಗಿತ್ತು. ಹಾಗಾದರೆ ಅಧೀನ ಕಾರ್ಯದರ್ಶಿಗಳು ನೀಡಿರುವ ಆದೇಶ ಕೋರ್ಟ್  ಆದೇಶವನ್ನು ಉಲ್ಲಂಘಿಸಿದಂತಲ್ಲವೇ?

ಈಗಿನ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯಿಂದ ವಸತಿ ಗೃಹಗಳಿಗಾಗಿ ಆದೇಶ ತಂದಿರುವುದಲ್ಲದೇ, ಕಟ್ಟಡಗಳಿಗೆ ಅಳತೆ ನಿಗದಿ ಗೊಳಿಸಿರುವುದು ವಿಪರ್ಯಾಸವೇ ಸರಿ. 1) ಜಿಲ್ಲಾಧಿಕಾರಿಗಳ ವಸತಿ ಗೃಹಕ್ಕೆ 1 ಎಕರೆ 29 ಗುಂಟೆ. 2) ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳ ವಸತಿ ಗೃಹ 19 ಗುಂಟೆ. 3) ಪೊಲೀಸ್ ಮಹಾನಿರೀಕ್ಷರ ವಸತಿ ಗೃಹಕ್ಕೆ 19 ಗುಂಟೆ. 4) ಪೊಲೀಸ್ ಅಧೀಕ್ಷರ ವಸತಿ ಗೃಹಕ್ಕೆ 19 ಗುಂಟೆ. 5) ಅಪರ ಜಿಲ್ಲಾಧಿಕಾರಿಗಳ ವಸತಿ ಗೃಹಕ್ಕೆ 19 ಗುಂಟೆ. 6) ಎಲ್ಲಾ ಗೃಹಗಳಿಗೆ ಓಡಾಡಲು ರಸ್ತೆಗೆ 1 ಎಕರೆ 6 ಗುಂಟೆ ನಿಗದಿಯಾಗಿದೆ. 

ಈಗಾಗಲೇ SSIMS & RC ಹೈಟೆಕ್ ಆಸ್ಪತ್ರೆ ಬಳಿ ನಿರ್ಮಿಸಿರುವ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳ ವಸತಿಗೃಹಗಳನ್ನು ಏನು ಮಾಡಬೇಕು? ಹಾಳು ಕೊಂಪೆಯಾಗಿರುವ ಈ ಕಟ್ಟಡದ ಗತಿ ಏನು?. 

ಸ್ಮಾರ್ಟ್ ಸಿಟಿ ವತಿಯಿಂದ ಬಯಲು ರಂಗಮಂದಿರ ಮತ್ತು ಥೀಮ್ ಪಾರ್ಕ್‍ಗಳನ್ನು ನಿರ್ಮಿಸಲು ಯೋಜನೆಯಾಗಿದ್ದು, ಸದ್ಯದಲ್ಲೆ ಕಾಮಗಾರಿ ಪ್ರಾರಂಭವಾಗುತ್ತವೆ. ಸಾರ್ವಜನಿಕರು, ಶಿಕ್ಷಣತಜ್ಞರು, ಶಿಕ್ಷಣ ಪ್ರೋತ್ಸಾಹಕರು, ವಿಶ್ವವಿದ್ಯಾಲಯದ  ದೃಶ್ಯಕಲಾ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹ ನಿರ್ಮಾಣವನ್ನು ಖಂಡಿಸಿ, ಪ್ರತಿಭಟಿಸೋಣ. ಈಗಾಗಲೆ ಸರ್ಕಾರದಿಂದ ಮಂಜೂರಾಗಿರುವ ಮತ್ತು ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಖಾಯಂ ಆಗಿ ಭರ್ತಿ ಮಾಡಿಕೊಂಡು ವಿಶ್ವವಿದ್ಯಾಲಯ ದೃಶ್ಯಕಲಾ ಕಾಲೇಜು ಇನ್ನೂ ಹೆಚ್ಚು ಬೆಳೆಯಲಿ ಎಂದು ಆಶಿಸೋಣ.


ಹೆಚ್.ಎನ್. ಶಿವಕುಮಾರ್ ಬಿ.ಇ., (ಸಿವಿಲ್)
ಮಾಜಿ ಸದಸ್ಯರು, ಮಹಾನಗರಪಾಲಿಕೆ , ದಾವಣಗೆರೆ
ಮಾಜಿ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರು ಕುವೆಂಪು ವಿವಿ,
ommarket007@gmail.com

Leave a Reply

Your email address will not be published.