ಮೀಸಲಾತಿಗೆ ಹೋರಾಟ, ಅವಕಾಶಕ್ಕೆ ಮೌನ !

ಮೀಸಲಾತಿಗೆ  ಹೋರಾಟ, ಅವಕಾಶಕ್ಕೆ ಮೌನ !

ಮೀಸಲಾತಿಗೆ ಹೋರಾಟ ನಡೆಸುತ್ತಿರುವವರು ಮೀಸಲು ಹುದ್ದೆಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಮೌನವಾಗಿದ್ದಾರೆ.

– ನ್ಯಾ. ನಾಗಮೋಹನ್ ದಾಸ್

ದಾವಣಗೆರೆ, ಫೆ. 20 – ಎಸ್.ಟಿ. ಮೀಸಲಾತಿ ಬೇಕು, ಒ.ಬಿ.ಸಿ. ಮೀಸಲಾತಿ ಬೇಕು, ಮೀಸಲಾತಿ ಹೆಚ್ಚಿಸಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಆದರೆ, ಖಾಸಗೀಕರಣ, ಹುದ್ದೆಗಳ ಖಾಲಿ ಇರಿಸಿಕೊಳ್ಳುವುದು, ಅರೆಕಾಲಿಕ ಹುದ್ದೆ ಹಾಗೂ ಹೊರ ಗುತ್ತಿಗೆಯಿಂದಾಗಿ ಪ್ರತಿ ವರ್ಷ ಮೀಸಲು ಹುದ್ದೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಇವರೆಲ್ಲ ಮೌನವಾಗಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆರ್.ಎಲ್. ಕಾನೂನು ಕಾಲೇಜಿ ನಲ್ಲಿ ಅಂತರರಾಷ್ಟ್ರೀಯ ಸಾಮಾಜಿ ಕ ನ್ಯಾಯ ದಿನದಂದು  ಆಯೋಜಿಸಲಾಗಿದ್ದ `ಸಾಮಾಜಿಕ ನ್ಯಾಯ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರದ 60 ಲಕ್ಷ ಹುದ್ದೆಗಳು ಖಾಲಿ ಇದ್ದರೆ ರಾಜ್ಯ ಸರ್ಕಾರದಲ್ಲಿ 2.64 ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿದರೆ ಮೀಸಲಾತಿಯವರಿಗೆ ಹಾಗೂ ಮಹಿಳೆಯರಿಗೆ ಅವಕಾಶ ಸಿಗುತ್ತದೆ. 1992ರಲ್ಲಿ ಬಂಡವಾಳ ಹಿಂತೆಗೆತದ ನಂತರ ಕಂಪನಿಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದ್ದು, ಅಲ್ಲಿ ಮೀಸಲಾತಿ ಅಂತ್ಯವಾಗುತ್ತಿದೆ. ಸರ್ಕಾರ ಹುದ್ದೆಗಳನ್ನು ಹೊರ ಗುತ್ತಿಗೆ ಹಾಗೂ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಅಲ್ಲೂ ಮೀಸಲಾತಿ ಸಿಗುತ್ತಿಲ್ಲ. ಮೀಸಲಾತಿ ಬೇಕೆಂದು ಹೋರಾಟ ನಡೆಸುತ್ತಿರುವವರು ಹುದ್ದೆಗಳ ಬಗ್ಗೆ ಯಾರಾದೂ ಕೇಳ್ತಿದಾರಾ? ಎಂದು ನಾಗಮೋಹನ ದಾಸ್ ಕೇಳಿದ್ದಾರೆ.

ಸಾಮಾಜಿಕ ನ್ಯಾಯ ಎಂದರೆ ಮೀಸಲಾತಿ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯದ ಸಣ್ಣ ಭಾಗ ಮಾತ್ರ. ಸಂಕಷ್ಟಕ್ಕೆ ಸಿಲುಕಿರುವ ರೈತರು, ಮಹಿಳೆಯರು, ಹಿಂದುಳಿದ ಜಾತಿಗಳ ಸಣ್ಣ ವರ್ಗಗಳು, ಕಾರ್ಮಿಕರು ಸೇರಿದಂತೆ ಹೆಚ್ಚು ಜನರು ಸಾಮಾಜಿಕ ನ್ಯಾಯಾಲಯದ ಪರಿಕಲ್ಪನೆಗೆ ಬರಬೇಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಬಿಕ್ಕಟ್ಟಿನಿಂದ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಈ ಬಿಕ್ಕಟ್ಟಿನ ಅವಧಿಯಲ್ಲೇ ಉದ್ಯಮಿ ಮುಕೇಶ್ ಅಂಬಾನಿ ಅವರ ಪ್ರತಿ ಗಂಟೆಯ ಆದಾಯ 90 ಕೋಟಿ ರೂ.ಗಳಿಗೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರ ಒಂದು ಗಂಟೆ ಆದಾಯ ಗಳಿಸಲು ಜನ ಸಾಮಾನ್ಯರು 90 ಜನ್ಮ ಎತ್ತಿದರೂ ಆಗುವುದಿಲ್ಲ. ಇಂತಹ ಅಸಮಾನತೆ ಕಾಣುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದವರು ತಿಳಿಸಿದರು.

ಇತ್ತೀಚಿನ ಚುನಾವಣೆಗಳಲ್ಲಿ ಜಾತಿ, ಧರ್ಮ ಹಾಗೂ ಹಣದ ಪ್ರಭಾವ ಹೆಚ್ಚಾಗುತ್ತಿದೆ. ಇದರಿಂದಾಗಿ ನಾವು ಸಾಮಾಜಿಕ ನ್ಯಾಯದಲ್ಲಿ ಹಿಂದೆ ಗಳಿಸಿದ್ದನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ ಎಂದ ನಾಗಮೋಹನ್ ದಾಸ್, 1988ರಲ್ಲಿ ಲೀಟರ್‌ಗೆ 5 ರೂ. ಇದ್ದ ಪೆಟ್ರೋಲ್ ಬೆಲೆ ಈಗ 100 ರೂ. ದಾಟಿದೆ. ಇದು ಸಾಮಾಜಿಕ ನ್ಯಾಯ ಎಲ್ಲಿ ಹೋಯಿತು? ಎಂಬ ಪ್ರಶ್ನೆಯನ್ನೂ ತರುತ್ತಿದೆ ಎಂದರು.

ಅಸಮಾನತೆಯ ಈ ಸಂದರ್ಭದಲ್ಲಿ ನಾವು ನಿರಾಶಾವಾದಿಗಳಾಗಬಾರದು. ಸೂರ್ಯ ಇಲ್ಲದಿದ್ದರೂ ಬೆಳಕು ಕೊಡಬಲ್ಲೆ ಎಂದು ಮಿಂಚು ಹುಳು ಹೇಳುವ ರೀತಿಯಲ್ಲೇ ನಾವೆಲ್ಲರೂ ನಮ್ಮ ಸಾಮರ್ಥ್ಯದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಒಕ್ಕೂಟದ ಅಧ್ಯಕ್ಷ ಡಿ.ಪಿ. ಬಸವರಾಜ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ತಮ್ಮ ಸಾಮಾಜಿಕ ಕಳಕಳಿಯ ವಿಚಾರಗಳನ್ನೇ ತಾವು ನೀಡುವ ತೀರ್ಪುಗಳಲ್ಲೂ ಅಳವಡಿಸಿದ್ದಾರೆ. ಅವರ ಹಲವಾರು ತೀರ್ಪುಗಳು ನ್ಯಾಯಾಂಗದಲ್ಲಿ ಮೈಲಿಗಲ್ಲುಗಳಾಗಿವೆ ಎಂದು ಹೇಳಿದರು.

ವೇದಿಕೆಯ ಮೇಲೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್ ಕುಮಾರ್ ಉಪಸ್ಥಿತರಿದ್ದರು. ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಎಂ. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.

ಎನ್. ಸುಚಿತ್ರ ಗೌಡ ಮತ್ತು ಸಂಗಡಿಗರು ಪ್ರಾರ್ಥಿಸಿ ದರು. ಉಪನ್ಯಾಸಕ ಡಾ. ಜಿ.ಎಸ್. ಯತೀಶ್ ಸ್ವಾಗತಿಸಿ ದರೆ, ಉಪನ್ಯಾಸಕಿ ಡಾ.ಟಿ.ಸಿ. ಪಂಕಜ ವಂದಿಸಿದರು.

Leave a Reply

Your email address will not be published.