ಭರಮಸಾಗರ : 40 ಕೆರೆಗಳಿಗೆ ನೀರು

ಭರಮಸಾಗರ : 40 ಕೆರೆಗಳಿಗೆ ನೀರು

ಭರಮಸಾಗರ, ಫೆ.20- ಐತಿಹಾಸಿಕ ಭರಮಸಾಗರದಲ್ಲಿನ ದೊಡ್ಡಕೆರೆ, ಸಣ್ಣಕೆರೆ, ಎಮ್ಮೆಹಟ್ಟಿ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಿ, ಈ ವ್ಯಾಪ್ತಿಯ ಸುಮಾರು 40 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಶಾಸಕರು ಭರಮಸಾಗರದ ದೊಡ್ಡಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ರೈತರ ಬಗ್ಗೆ ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶ್ರೀಗಳಿಗೆ ಇರುವ ಕಾಳಜಿ ಹಾಗೂ ನಮ್ಮ ಒತ್ತಾಸೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ 565 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಒಂದು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಆರಂಭಗೊಂಡಿದೆ. ಎಸ್‌.ಎನ್‌.ಸಿ ಕಂಪನಿ ಬಿರುಸಿನಿಂದ ಕಾಮಗಾರಿ ನಡೆಸುತ್ತಿದೆ. ಕಳೆದ 200 ವರ್ಷಗಳಿಂದ ಇಲ್ಲಿನ ದೊಡ್ಡಕೆರೆಯಲ್ಲಿ ಹೂಳು ತುಂಬಿದೆ. ಇದರಿಂದ ಅಂತರ್ಜಲ ಹೆಚ್ಚಿಸಲು ಸಾಧ್ಯವಾಗಿರಲಿಲ್ಲ.

ಇದನ್ನು ಮನಗಂಡು ಸುತ್ತಲಿನ 72 ಹಳ್ಳಿಗಳ ರೈತರ ಬದುಕು ಗಮನದಲ್ಲಿಟ್ಟುಕೊಂಡು ಕೆರೆಗಳ ಹೂಳು ತೆಗೆಸಲಾಗುತ್ತಿದೆ. ಇದರಿಂದ ಇನ್ನೂ 10 ವರ್ಷ ಮಳೆ ಬಾರದಿದ್ದರೂ ನೀರು ಸಂಗ್ರಹಿಸಬಹುದು ಎಂದು ತಿಳಿಸಿದರು.

48 ಕಿ.ಮೀ. ಪೈಪ್‌ಲೈನ್: ಈಗಾಗಲೇ 48 ಕಿ.ಮೀ. ನಷ್ಟು ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಕೇವಲ 4 ಕಿ.ಮೀ. ಮಾತ್ರ ಪೈಪ್‌ಲೈನ್ ಅಳವಡಿಸಬೇಕಾಗಿದೆ. ಈ ಕೆರೆಗೆ ನೀರು ಹರಿಸುವುದರಿಂದ ಸುತ್ತಮುತ್ತ 20 ಕಿ.ಮೀ. ವರೆಗೆ ಬೋರ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ ಎಂದು ಶಾಸಕರು ಹೇಳಿದರು.

ಕಾಕಬಾಳು ಗ್ರಾಮದ ಸಮೀಪ ಕೆಪಿಟಿಸಿಎಲ್‌ಗೆ 10 ಎಕರೆ ಜಮೀನು ನೀಡಿದ್ದು, 220 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದಕ್ಕಾಗಿ 2.50 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಚಿತ್ರದುರ್ಗ ತಾಲ್ಲೂಕು ಟಿಎಪಿಸಿಎಂ ಎಸ್ ಅಧ್ಯಕ್ಷ ಕೋಗುಂಡೆ ಮಂಜಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಚೌಲಿಹಳ್ಳಿ ಶೈಲೇಶ್, ಜಿ.ಪಂ. ಸದಸ್ಯ ಡಿ.ವಿ ಶರಣಪ್ಪ, ತಾ.ಪಂ. ಸದಸ್ಯ ಕಲ್ಲೇಶ್, ಶಾಸಕರ ಆಪ್ತ ಕಾರ್ಯದರ್ಶಿ ಲಾಯರ್ ಫಣಿಯಪ್ಪ, ಕೊಳಹಾಳು ಶರಣಪ್ಪ, ನಾಗೇಂದ್ರಪ್ಪ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.


– ಬಿ.ಜೆ. ಅನಂತಪದ್ಮನಾಭರಾವ್

Leave a Reply

Your email address will not be published.