ರೈತ ಹಾಗೂ ಕಾರ್ಮಿಕ ಸಂಘಟನೆಗಳಿಂದ ರಸ್ತೆ ತಡೆ

ರೈತ ಹಾಗೂ ಕಾರ್ಮಿಕ ಸಂಘಟನೆಗಳಿಂದ ರಸ್ತೆ ತಡೆ

ದಾವಣಗೆರೆ, ಫೆ.18- ದೆಹಲಿಯಲ್ಲಿನ ಹೋರಾಟ ನಿರತ ರೈತರ ಕರೆಯ ಮೇರೆಗೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸ ಬೇಕು ಹಾಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ನಗರ ದಲ್ಲಿಂದು ರೈತ ಹಾಗೂ ಕಾರ್ಮಿಕ ಸಂಘ ಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದವು.

ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿದ್ದ ಎಐಕೆಎಸ್‍ಸಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ರೈಲು ತಡೆ ನಡೆಸಲು ಮುಂದಾದಾಗ, ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ತಡೆದರು. ಇದರಿಂದಾಗಿ ರೈಲ್ವೆ ತಡೆ ನಡೆಸಲು ತೆರಳಿದ್ದ ಪ್ರತಿಭಟನಾಕಾರರು ಅನಿವಾರ್ಯವಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲೇ ರಸ್ತೆ ತಡೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ಹಿಂಪಡೆಯುವರೆಗೂ ಹೋರಾಟ ಮುಂದುವರೆಸಲಾಗುವುದು. ಕಳೆದ 90 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದರೂ ಸಹ ಕೇಂದ್ರ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದ್ದೆ. ಬದಲಿಗೆ ರೈತ ಪರ ಹೋರಾಟ ಮಾಡುವವರನ್ನು ದೇಶದ್ರೋಹಿಗಳೆಂದು ಕೇಸು ದಾಖಲು ಮಾಡಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸದರಿ ಸಾಲಿನಲ್ಲಿ ಮೆಕ್ಕೆಜೋಳಕ್ಕೆ 1760 ರೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಖರೀದಿದಾರರು 1300 ರೂ.ಗೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಪ್ರತಿ ಕ್ವಿಂಟಾಲ್‍ಗೆ  ಕನಿಷ್ಟ ಬೆಂಬಲ ಬೆಲೆಗೆ ಯಾವುದೇ ಕಾಯಿದೆ ಇಲ್ಲದಿರುವುದೇ ರೈತರ ಶೋಷಣೆಗೆ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಎಂಎಸ್‍ಪಿಗೆ ಕಾಯಿದೆ ರೂಪಿಸಿ, ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ರೈತರ ಉತ್ಪನ್ನ ಖರೀದಿಸುವವರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು ವ್ಯತ್ಯಾಸದ ಹಣವನ್ನು ಮರಳಿ ರೈತರಿಗೆ ಕೊಡಿಸುವ ಅಂಶಗಳನ್ನು ಕಾಯಿದೆ ಹೊಂದಿರಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಹೆಚ್.ಕೆ.ರಾಮಚಂದ್ರಪ್ಪ, ಹೆಚ್.ಜಿ. ಉಮೇಶ್, ರೈತ ಸಂಘಟನೆಯ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜು ನಾಥ್, ಹೊನ್ನೂರು ಮುನಿಯಪ್ಪ, ತೇಜ ಸ್ವಿನಿ ಪಟೇಲ್, ಪೂಜಾರ್ ಅಂಜಿನಪ್ಪ, ಜಯಪ್ಪ, ಹಾಲೇಶ್, ಶಿವರಾಜ್, ಭೀಮಾರೆಡ್ಡಿ, ಆವರಗೆರೆ ಚಂದ್ರು, ಐರಣಿ ಚಂದ್ರು, ರಂಗನಾಥ್, ಹಾಳೂರು ಸಿದ್ದೇಶ್, ಕೈದಾಳೆ ಮಂಜುನಾಥ್, ತಿಪ್ಪೇಸ್ವಾಮಿ, ಸತೀಶ್ ಅರವಿಂದ್, ಸುನೀತ್‍ಕುಮಾರ್, ಚಂದ್ರಪ್ಪ, ಭಾರತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.