ಕಾಶ್ಮೀರದ ವಲಸೆಗಾರ ಹಳದಿ ತಲೆ `ಸಿಪಿಲೆ’

ಕಾಶ್ಮೀರದ ವಲಸೆಗಾರ  ಹಳದಿ ತಲೆ `ಸಿಪಿಲೆ’

ಇಷ್ಟು ಸಣ್ಣ ಹಕ್ಕಿ ಸೂಕ್ತ ಪರಿಸರವನ್ನರಸಿ ಸಾವಿರಾರು ಕಿಲೋಮೀಟರ್ ದೂರ ಪ್ರಯಣ ಕೈಗೊಳ್ಳುವುದು ಅವುಗಳ ಸವಾಲಿನ ಜೀವನ ಶೈಲಿಗೆ ನಿದರ್ಶನ….

ದಾವಣಗೆರೆಯದ್ದು ಅಪೂರ್ವ ಪರಿಸರ.  ಅನೇಕ ವಲಸೆ ಹಕ್ಕಿಗಳ ತಂಗುದಾಣವಾಗಿ ಮಾರ್ಪಟ್ಟಿರುವುದು ಬಹಳಷ್ಟು ಜನರಿಗೆ ತಿಳಿಯದು. ಇಲ್ಲಿನ ಉಷ್ಣ ಹವೆ, ಹಲವಾರು ಕೆರೆಗಳು ಮತ್ತು ಸುತ್ತಲೂ ಕೃಷಿ ಭೂಮಿಯಿರುವುದೇ ಪ್ರಮುಖ ಕಾರಣವೆನ್ನಬಹುದು. ಚಳಿಗಾಲದ ವಲಸೆಗಾರ ಹಕ್ಕಿಗಳಿಗೆ ದಾವಣಗೆರೆಯ ಹವಾಮಾನ ಅಪ್ಯಾಯಮಾನ. 

ಅಂತೆಯೇ ಬೆಳೆಗಳಲ್ಲಿರುವ ಕೀಟಗಳು ಪ್ರಮುಖ ಆಹಾರ. ಹಲವಾರು ಚಳಿಗಾಲದ ವಲಸಿಗ ಹಕ್ಕಿಗಳನ್ನು ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪತ್ತೆ ಹಚ್ಚಿ, ಗುರುತಿಸಿ ಮತ್ತು ದಾಖಲಿಸುವ ಕೆಲಸ ವೈಯಕ್ತಿಕ ಮಟ್ಟದಲ್ಲಿ ನಡೆದಿದೆ. ಅಂತಹ ಚಳಿಗಾಲದ ವಲಸೆಗಾರ ಹಕ್ಕಿಗಳಲ್ಲಿ ಅಪರೂಪದ್ದು ಹಳದಿ ತಲೆ ಸಿಪಿಲೆ(Citrine wagtail). ಪ್ರಾಣಿಶಾಸ್ತ್ರೀಯ ಹೆಸರು ಮೊಟಸಿಲ ಸಿಟ್ರಿಯೋಲ(Motacilla citreola). ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದು (19 ಸೆ.ಮೀ.). ಗಂಡು ಹಕ್ಕಿಯ ತಲೆ ಪೂರ್ತಿ ಉತ್ಕೃಷ್ಟ ಹಳದಿ ಬಣ್ಣ. ದೇಹದ ಮೇಲ್ಭಾಗ ಹಳದಿಯಿದ್ದು ಕುತ್ತಿಗೆಯಲ್ಲಿ ಅರ್ಧ ಕಪ್ಪು ಬಣ್ಣದ ಪಟ್ಟಿ ಕಾಣಿಸುತ್ತದೆ.  ದೇಹದ ಮೇಲ್ಭಾಗ ಬೂದು ಮತ್ತು ಕೆಳಗಿನ ಭಾಗ ಹಳದಿ ಮಿಶ್ರಿತ ಬಿಳಿ ಬಣ್ಣದ್ದಾಗಿರುತ್ತದೆ.  ಅಗಲವಾದ ಬಿಳಿಯ ಪಟ್ಟಿಗಳು ರೆಕ್ಕೆಗಳಲ್ಲಿ ಕಾಣುವುದು.  ಹೆಣ್ಣು ಹಕ್ಕಿಯಲ್ಲಿ ಅಗಲವಾದ ಹಳದಿ ಹುಬ್ಬು ಇದ್ದು ಕಿವಿಯ ಸುತ್ತ ತಿಳಿ ಹಳದಿ ಬಣ್ಣ ಚೆಲ್ಲಿದಂತಿರುತ್ತದೆ.

ತನ್ನ ಗುಂಪಿನ ಇತರೆ ಸದಸ್ಯರಂತೆ ಬಾಲವನ್ನು ಆಡಿಸುತ್ತಿರುತ್ತದೆ. ಕೆರೆ, ಸರೋವರಗಳ ಹತ್ತಿರ ತನ್ನ ಆಹಾರವಾದ ನೀರಿನ ಕೀಟಗಳನ್ನು ಹುಡುಕುತ್ತಿರುತ್ತದೆ. ಕೆರೆಯಲ್ಲಿರುವ ಜೊಂಡಿನಲ್ಲಿ ಅಥವಾ ಹತ್ತಿರದ ಹುಲ್ಲು ಹಾಸಿನಲ್ಲಿ ಅತ್ತಿತ್ತ ಚುರುಕಾಗಿ ಓಡಾಡುತ್ತಾ ಹುಳುಗಳನ್ನು ಹಿಡಿದು ತಿನ್ನುತ್ತವೆ.  ಸಣ್ಣ ಗುಂಪುಗಳಲ್ಲಿ ವಾಸ. ಸಂತಾನಾಭಿವೃದ್ಧಿ ಸಮಯದಲ್ಲಿ ಬಣ್ಣಗಳಲ್ಲಿ ವ್ಯತ್ಯಾಸವಾಗುವುದು. ಕಾಶ್ಮೀರದ ಕಣಿವೆಗಳಲ್ಲಿ ಸುಮಾರು 1500 ರಿಂದ 4000 ಮೀಟರ್ ಎತ್ತರದ ಪ್ರದೇಶಗಳಲ್ಲಿ ಮೇ ತಿಂಗಳಿಂದ ಜೂನ್‍ವರೆಗೆ ಹುಲ್ಲಿನ ಜೊಂಡಿನಲ್ಲಿ ಬಟ್ಟಲಾಕಾರದ ಗೂಡು ಮಾಡುತ್ತವೆ.  ಮೂರರಿಂದ ಐದು ಮೊಟ್ಟೆಗಳನ್ನಿಟ್ಟು, ಮರಿ ಮಾಡಿ ತಂದೆ-ತಾಯಿಯರಿಬ್ಬರೂ ಸೇರಿ ಪೋಷಿಸುತ್ತವೆ.  ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಮಯನ್ಮಾರ್‍ಗಳಲ್ಲೂ ನೋಡಲು ಲಭ್ಯ. ಕರ್ನಾಟಕದ ಮಟ್ಟಿಗೆ ಅಪರೂಪದ ವಲಸೆಗಾರ.  ದಾವಣಗೆರೆಯ ಕೊಂಡಜ್ಜಿ ಕೆರೆ ಮತ್ತು ದೇವರ ಬೆಳಕೆರೆಗಳಲ್ಲಿ ಕಂಡು ಬಂದವು.  ಉತ್ತರ ಭಾರತದ ಕೊರೆಯುವ ಚಳಿಯನ್ನು ತಡೆಯಲಾರದೆ ಉಷ್ಣ ಹವೆ ಇರುವ ದಾವಣಗೆರೆಗೆ ನವೆಂಬರ್ ತಿಂಗಳಲ್ಲಿ ಆಗಮಿಸಿ ಮತ್ತೆ ಮಾರ್ಚಿ ವೇಳೆಗೆ ಹಿಂದಿರುಗುವವು. ಈ ಪುಟ್ಟ ಹಕ್ಕಿಗಳ ಹಾರಾಟದ ಚೈತನ್ಯ ಒಂದು ಅಚ್ಚರಿಯೇ ಸರಿ. ಪ್ರಕೃತಿಯಲ್ಲಿರುವ ಪ್ರತಿ ಜೀವಿಯ ವೈಶಿಷ್ಟ್ಯತೆ ಅರಿಯುವುದೇ ವೈಜ್ಞಾನಿಕ ಅಧ್ಯಯನದ ಪ್ರಮುಖ ಅಂಶ. ಇಷ್ಟು ಸಣ್ಣ ಹಕ್ಕಿ ಸೂಕ್ತ ಪರಿಸರವನ್ನರಸಿ ಸಾವಿರಾರು ಕಿಲೋಮೀಟರ್ ದೂರ ಪಯಣ ಕೈಗೊಳ್ಳುವುದು ಅವುಗಳ ಸವಾಲಿನ ಜೀವನ ಶೈಲಿಗೆ ನಿದರ್ಶನ ಮತ್ತು ಮಾನವರಿಗೊಂದು ಪ್ರಕೃತಿ ತಿಳಿಸಿದ ಪಾಠ. 


– ಡಾ. ಎಸ್. ಶಿಶುಪಾಲ, 
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ, ದಾವಣಗೆರೆ.
sskumb@gmail.com

Leave a Reply

Your email address will not be published.