ಮನೆ ಕೊಟ್ಟರೂ ಬೇಡ, ಸಾಲ ಬೇಕೆಂದರೂ ಸಿಗಲ್ಲ

ಮನೆ ಕೊಟ್ಟರೂ ಬೇಡ, ಸಾಲ ಬೇಕೆಂದರೂ ಸಿಗಲ್ಲ

ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಸಂವಾದದಲ್ಲಿ ಫಲಾನುಭವಿಗಳು

ದಾವಣಗೆರೆ, ಜ. 20 – ಮಾಜಿ ದೇವದಾಸಿ ಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ವಸತಿ ಕಲ್ಪಿಸುತ್ತೇವೆ ಎಂದರೂ ಬೇಡ ಎನ್ನುತ್ತಿದ್ದಾರೆ. ಮತ್ತೊಂದೆಡೆ ಬ್ಯಾಂಕಿನಲ್ಲಿ ಸಬ್ಸಿಡಿ ಸಾಲ ಬೇಕೆಂದರೂ ಸಿಗುತ್ತಿಲ್ಲ ಎಂಬ ಮಾತುಗಳು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲ ವಿ. ಟೆಂಗಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಫಲಾನುಭವಿಗಳ ಜೊತೆಗಿನ ಸಂವಾದ ಸಂದರ್ಭದಲ್ಲಿ ಕೇಳಿ ಬಂದವು.

ಮಾಜಿ ದೇವದಾಸಿಯರಿಗೆ ವಸತಿ ಕಲ್ಪಿಸಲು ಪ್ರತಿ ಜಿಲ್ಲೆಯಲ್ಲಿ 2-5 ಎಕರೆ ಜಮೀನು ಪಡೆಯಬೇಕೆಂಬ ಪ್ರಸ್ತಾವನೆ ಇತ್ತು. ಆದರೆ, ಮಾಜಿ ದೇವದಾಸಿಯರು ನಮ್ಮನ್ನು ಪ್ರತ್ಯೇಕವಾಗಿ ಇರಿಸಬಾರದು ಎಂದು ಆಕ್ಷೇಪಿಸಿದ್ದಾರೆ ಎಂದು ಶಶಿಕಲಾ ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರಿಗೆ ತುರ್ಚಘಟ್ಟದ ಬಳಿ ವಸತಿಗೆ ಜಾಗ ನೋಡಲಾಗಿತ್ತು. ಆದರೆ, ಲೈಂಗಿಕ ಅಲ್ಪಸಂಖ್ಯಾತರು ಅಲ್ಲಿ ಬೇಡ ಎಂದಿದ್ದರು ಎಂದು ಸಭೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರ ಸಂಘದ ಚೈತ್ರ, ಅದೇ ಜಾಗದಲ್ಲಿ ವಸತಿ ಪಡೆಯಲು ಸಿದ್ಧವಿರುವುದಾಗಿ ಹೇಳಿದರು.

ಆಗ ಮಾತನಾಡಿದ ವಿಜಯ್ ಕುಮಾರ್, ವಸತಿ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ವರದಿ ರೂಪಿಸುವುದಾಗಿ ಹೇಳಿದರು.

ನಿಗಮ ಸಬ್ಸಿಡಿ ನೀಡುವ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕುಗಳು ವಿಳಂಬ ಮಾಡುತ್ತಿವೆ ಎಂಬ ಆಕ್ಷೇಪಗಳು ಕೇಳಿ ಬಂದವು. ಸಬ್ಸಿಡಿ ಸಾಲದ ನಂತರ ಇನ್ನೊಮ್ಮೆ ಸಾಲ ನೀಡಲು ಬ್ಯಾಂಕುಗಳು ಹಿಂಜರಿಯುತ್ತಿವೆ, ಸಾಲಕ್ಕಾಗಿ ಅಲೆದಾಡಿಸಲಾಗುತ್ತಿದೆ, ಸಾಲ ತೀರುವಳಿ ಪತ್ರ ಕೊಡುತ್ತಿಲ್ಲ ಎಂದು ಆಕ್ಷೇಪಿಸಲಾಯಿತು.

ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ, ಸಿಬಿಲ್ ಸ್ಕೋರ್ ವ್ಯವಸ್ಥೆ ಬಳಸಿಕೊಂಡರೆ ಸಾಲ ತೀರುವಳಿ ಪತ್ರದ ಅಗತ್ಯ ಬರುವುದಿಲ್ಲ. ಸಾಲದ ಯೋಜನಾ ವರದಿಗಳು ಸಮರ್ಪಕವಾಗಿದ್ದರೆ ಸಾಲ ಸುಗಮವಾಗುತ್ತದೆ. ಸಾಲ ಕೇಳಲು ಬಂದವರಿಗೆ ಅಗತ್ಯ ದಾಖಲೆಗಳ ಬಗ್ಗೆ ಮೊದಲೇ ತಿಳಿಸುವಲ್ಲಿ ಕೆಲ ಬ್ಯಾಂಕುಗಳಲ್ಲಿ ಲೋಪಗಳಾಗಿವೆ ಎಂದು ಹೇಳಿದರು.

ಸಭೆಯಲ್ಲಿ ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್, ಜಯಮ್ಮ, ದಿಶಾ ಸದಸ್ಯೆ ಚೇತನ ಶಿವಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಜೆ. ಮೋಕ್ಷಪತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.