ಜಿ. ಬೇವಿನಹಳ್ಳಿಯಲ್ಲಿ `ನಮ್ಮ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಚಾಲನೆ

ಜಿ. ಬೇವಿನಹಳ್ಳಿಯಲ್ಲಿ `ನಮ್ಮ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಚಾಲನೆ

ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುವುದು ಇದರ ಉದ್ದೇಶ. 

– ಮಮತಾ ಹೊಸಗೌಡರ್‌, ಉಪ ವಿಭಾಗಾಧಿಕಾರಿಗಳು

ಮಲೇಬೆನ್ನೂರು, ಜ.19- ಸಮೀಪದ ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಂದಾಯ ಇಲಾಖೆವತಿಯಿಂದ `ನಮ್ಮ ನಡೆ ಹಳ್ಳಿ ಕಡೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಮಾತ ನಾಡಿ, ಮಧ್ಯವರ್ತಿಗಳ ಪ್ರವೇಶ ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ಹಾಗೂ ಧ್ವನಿ ಇಲ್ಲದ ಜನರಿಗೆ ಧ್ವನಿಯಾಗಿ ಕೆಲಸ ಮಾಡಿಕೊಡಲು ಸರ್ಕಾರ ನಮ್ಮ ನಡೆ ಹಳ್ಳಿ ಕಡೆ ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ.

ಅಧಿಕಾರಿಗಳು ನಿಮ್ಮ ಊರಿಗೆ ಬಂದು ಸರ್ಕಾರದಿಂದ ನಿಮಗೆ ಸಿಗಬೇಕಾದ ಸೌಲಭ್ಯ ಅಥವಾ ಗ್ರಾಮದಲ್ಲಿ ನಿಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹಾರ ಒದಗಿಸುತ್ತಾರೆ.

ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂಗವಿಕಲ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ ಯೋಜನೆ, ಆದರ್ಶ ವಿವಾಹ ಯೋಜನೆಗಳ ಬಗ್ಗೆ ಜನರಿಗೆ ವಿವರವಾಗಿ ಹೇಳಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳನ್ನು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀ ಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರು, ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದೆ. ಇದರಿಂದ ನಮ್ಮ ದೇಶ ಈಗ 5ನೇ ಆರ್ಥಿಕ ದೇಶವಾಗಿದೆ. ಆದರೂ ಗ್ರಾಮೀಣ ಪ್ರದೇಶದ ಜನರು ಇನ್ನೂ ಬಹಳ ಸಮಸ್ಯೆಗಳಲ್ಲಿದ್ದು, ಅರ್ಹರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಜನರು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನೇರವಾಗಿ ನಮಗೆ ತಿಳಿಸಬಹುದು, ಸಾಧ್ಯವಾದರೆ ಸ್ಥಳದಲ್ಲಿಯೇ ಅವುಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ರಾಮಚಂದ್ರಪ್ಪ ಹೇಳಿದರು.

ಸಭೆಯಲ್ಲಿ ನಾಗರಿಕರು ಗ್ರಾಮದ ಕೆಲವರು ಸರ್ಕಾರಿ ಜಾಗದಲ್ಲಿ ತಿಪ್ಪೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ತೆರವು ಮಾಡಿ ನಿವೇಶನ ರಹಿತರಿಗೆ ಜಾಗ ಕೊಡಿ ಅಥವಾ ಸರ್ಕಾರಿ ಕಟ್ಟಡಗಳಿಗೆ ಬಳಸಿಕೊಳ್ಳಿ ಎಂದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ವಿವಿಧ ಸೌಲಭ್ಯಗಳನ್ನು ಕೋರಿ 45 ಜನರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು.ಅರ್ಜಿ ಸ್ವೀಕರಿಸಿದ ಅವರು, ಅರ್ಜಿಗಳನ್ನು ಪರಿಶೀಲಿಸಿ ವಾರದಲ್ಲೇ ಫಲಿ ತಾಂಶ ನೀಡುತ್ತೇವೆಂದು ಭರವಸೆ ನೀಡಿದರು.

ಉಪತಹಶೀಲ್ದಾರ್‌ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾ.ಪಂ ಸದಸ್ಯರಾದ ಆಶಾ, ರೂಪಾ, ಕೆ.ಜಿ. ಮಹಾಂತೇಶ್, ಆನಂದಗೌಡ, ದೇವರಾಜ, ಎನ್‌.ಎಂ. ಪಾಟೀಲ್, ಬಿ.ಕೆ. ರಂಗನಾಥ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ನಂತರ ಇದೇ ಕಾರ್ಯಕ್ರಮವನ್ನು ಹರಳಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು. ಅಲ್ಲಿಯೂ ಸಹ 53 ಜನರು ವಿವಿಧ ಯೋಜನೆಗಳಿಗಾಗಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್, ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್‌ ಆರ್‌. ರವಿ ಅವರಿಗೆ ಅರ್ಜಿ ಸಲ್ಲಿಸಿದರು.

Leave a Reply

Your email address will not be published.