ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ : ಕಾಗಿನೆಲೆ ಶ್ರೀ

ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ : ಕಾಗಿನೆಲೆ ಶ್ರೀ

ರಾಣೇಬೆನ್ನೂರು, ಜ.17- ಈಗಾಗಲೇ ಇರುವ ಎಸ್.ಟಿ. ಮೀಸಲಾತಿಯನ್ನು ಕುರುಬರಿಗೂ ಕೊಡಿ ಎಂದು ಸಾಂವಿಧಾನಿಕ ಹಕ್ಕು ಪಡೆಯಲು ಈ ಹೋರಾಟ ಎಂದು ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳು ನುಡಿದರು.

ಶ್ರೀ ಗಳು ಪಾದಯಾತ್ರೆ ಮೂಲಕ ಕಾಗಿನೆಲೆಯಿಂದ ಹೊರಟು ಇಂದು ರಾಣೇಬೆನ್ನೂರಿಗೆ ಆಗಮಿಸಿ ಹೊರಬೀರಪ್ಪನ ಗುಡಿಯಲ್ಲಿ ಜಾಗೃತಿ ಸಭೆ ನಡೆಸಿದರು.

ಈಗಾಗಲೇ ಈ ವಿಷಯವಾಗಿ ಕೇಂದ್ರದ ಮಂತ್ರಿಗಳಾದ ಜೋಷಿ, ಸಂತೋಷ್‌ ಹಾಗೂ ರೇಣುಕಾ ಅವರುಗಳಿಗೆ  ಮನವಿ ಸಲ್ಲಿಸಲಾಗಿದೆ. ಅದನ್ನೇ ರಾಜ್ಯದ ಮುಖ್ಯಮಂತ್ರಿಗಳಿಗೂ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಶಿಫಾರಸ್ಸು ಮಾಡಿ ಕಳಿಸಿದ ಮೇಲೆ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು. ಈ ಪ್ರಕ್ರಿಯೆಯು ಶೀಘ್ರ ವಾಗಿ ನಡೆಯಬಹುದು ಎಂದು ಸ್ವಾಮೀಜಿ ಭರವಸೆಯ ಮಾತುಗಳನ್ನು ನುಡಿದರು.

ಈ ಹೋರಾಟದಲ್ಲಿ ರಾಜಕೀಯ ಇಲ್ಲ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಎಲ್ಲ ಪಕ್ಷದ ಮುಖಂಡರು ಇದ್ದಾರೆ. ಇಲ್ಲಿ ರಾಜ ಕಾರಣ ಇಲ್ಲ. ಕೇವಲ ಸಾಮಾಜಿಕ ಕಳಕಳಿ ಇದೆ ಎಂದು ಶ್ರೀ ಗಳು ನುಡಿದಾಗ ಜನರ ಕೇಕೆ, ಸಿಳ್ಳೆ, ಕರತಾಡನಗಳು ಮೊಳಗಿದವು.

ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ,‌ ಶ್ರೀ ರೇವಣಸಿದ್ದ ಶಾಂತಮುನಿ ಸ್ವಾಮೀಜಿ, ತಿಂತಿಣಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ, ಮಹದೇವಯ್ಯ ಒಡೆಯರ, ಶಾಸಕ ಅರುಣಕುಮಾರ ಪೂಜಾರ್, ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ, ನಗರಸಭೆ ಸದಸ್ಯರು  ಮಾರುತಿ ಹರಿಹರ ಮತ್ತಿತರರು ಪಾಲ್ಗೊಂಡಿದ್ದರು.

ಬೃಹತ್ ಮೆರವಣಿಗೆ : ಹಳೆಯ ಹೆದ್ದಾರಿಯ  ಪಶ್ವಿಮ ಬಡಾವಣೆಯ ಶ್ರೀ ಛತ್ರದ ದುರ್ಗಮ್ಮ ಗುಡಿಯಿಂದ ಕನಕ ಮೂರ್ತಿಯ ರಥಯಾತ್ರೆ, ಜೊತೆಗೆ ಕಾಯಕೋಲು ಹಿಡಿದ ನೂರಾರು ಭಕ್ತರ ಮಧ್ಯದಲ್ಲಿ ಶ್ರೀಗಳ ಪಾದಯಾತ್ರೆ ನಡೆಯಿತು.

ಜೋಡೆತ್ತು, ಒಂಟೆತ್ತುಗಳ ಲಾರಿಗಳು, ನೂರಾರು ಅಲಂಕರಿಸಿದ ಎತ್ತುಗಳು, ನೂರಾರು ಕುರಿಗಳು, ಟ್ರ್ಯಾಕ್ಟರ್‌ಗಳು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದ ಮೈಲುದ್ದದ ಮೆರವಣಿಗೆಯು ಒಳಬೀರಪ್ಪನ ಗುಡಿಮುಂದೆ ಹಾಯ್ದು ಸಭಾ ಸ್ಥಳ ಹೊರಬೀರಪ್ಪನ ಗುಡಿಗೆ ಬಂದಿತು.

Leave a Reply

Your email address will not be published.