ಹರಹರ : ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮಪ್ಪ ಚಾಲನೆ

ಹರಹರ : ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮಪ್ಪ ಚಾಲನೆ

ಹರಿಹರ, ಜ.16- ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ಕೆ  ಶಾಸಕ ಎಸ್. ರಾಮಪ್ಪ  ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು ಇಲಾಖೆ ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಲಸಿಕೆ ಪಡೆಯುವ ಮೂಲಕ ಜನರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿರಿ ಎಂದು ಕರೆ ನೀಡಿದರು.

ಜನರಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಹೋಗಲಾಡಿಸಲು ಹಾಗೂ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ, ನಗರಸಭೆ, ಆಸ್ಪತ್ರೆಯ ವೈದ್ಯರು, ಆಶಾ ಕಾರ್ಯಕರ್ತರು, ಸಿಬ್ಬಂದಿಗಳು ಸಾಕಷ್ಟು ಶ್ರಮ ವಹಿಸಿದ್ದಾರೆ. ಇದೀಗ ಕೊರೊನಾ ಮುಕ್ತ ಗೊಳಿಸುವುದಕ್ಕೆ ವ್ಯಾಕ್ಸಿನ್ ಸಿದ್ಧತೆಗೊಂಡು  ಚಾಲನೆ ಗೊಂಡಿದೆ. ಪ್ರತಿಯೊಬ್ಬ ನಾಗರಿಕರು ಆರೋಗ್ಯ ಇಲಾಖೆಯ ಮಾರ್ಗ ಸೂಚಿಗಳಂತೆ ನಡೆದುಕೊಂಡು ಇಲಾಖೆಗಳೊಂದಿಗೆ ಕೈಜೋಡಿಸ ಬೇಕೆಂದು ಕರೆ ನೀಡಿದರು. 

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ತಾವೇ ಮೊದಲು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ಪಡೆಯುವವರಲ್ಲಿ ವಿಶ್ವಾಸ ಮೂಡಿಸಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಪ್ರಾರಂಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತದೆ. ನಂತರ ಪೊಲೀಸ್ ಇಲಾಖೆ, ನಗರಸಭೆ ಪೌರ ಸಿಬ್ಬಂದಿಗಳು ಮತ್ತು ಅಧಿಕಾರಿಗಳಿಗೆ ಲಸಿಕೆ ನೀಡಲಾಗುತ್ತದೆ. ಕಂದಾಯ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯ್ತಿಗೆ ಹಂತ ಹಂತವಾಗಿ ಲಸಿಕೆ ನೀಡಲಾಗುವುದು. ಮೂರನೇ ಹಂತದ ಲಸಿಕೆಯು ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡು ನಂತರದ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯು ಚಾಲನೆ ಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಡಾ. ನಟರಾಜ್, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ವೈದ್ಯಾಧಿಕಾರಿ ಡಾ. ಡಿ ಚಂದ್ರಮೋಹನ್. ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ನಫೀಜ್ ಅಹಮದ್, ಗಂಗಾಧರ್‌ ಕೊಟಗಿ, ಉಮ್ಮೇಸಲ್ಮಾ, ಸಿದ್ದೇಶ್‌, ಉಮ್ಮಣ್ಣ, ದಾವಣಗೆರೆ ಆರೋಗ್ಯ ಇಲಾಖೆ ಮೇಲ್ವಿಚಾರಕ ಎಂ.ವಿ. ಹೊರಕೇರಿ, ಕಿರಿಯ ಸಹಾಯಕ ದಾದಾಪೀರ್, ಮಂಜುನಾಥ್‌, ವೈದ್ಯರುಗಳಾದ ಪಂಕಜಾ, ರಾಜಪ್ಪ, ಮಮತಾ, ಪ್ರತಾಪ್‌, ಬಿ. ಕಿರಣ್ ಕುಮಾರ್, ಆಸ್ಪತ್ರೆ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯವರು ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Leave a Reply

Your email address will not be published.