ಲಾಭ ಗಳಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಿ

ಲಾಭ ಗಳಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಿ

ನ್ಯಾಮತಿಯಲ್ಲಿನ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್

ದಾವಣಗೆರೆ, ಜ. 12- ಕೃಷಿಯನ್ನು ಲಾಭದಾಯಕವಾಗಿಸಲು ರೈತರು ಸಮಗ್ರ ಕೃಷಿ ನೀತಿ ಅಳವಡಿಕೊಳ್ಳುವುದರ ಜೊತೆಗೆ, ಬೆಳೆ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗ ಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಕರೆ ನೀಡಿದರು.

ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ನೀರಿದ್ದರೂ ರೈತರ ಆತ್ಮಹತ್ಯೆಗಳು ಸಂಭವಿಸುತ್ತಿವೆ.  ಕೋಲಾರದಲ್ಲಿ ಹೆಚ್ಚು ನೀರಿಲ್ಲ. ಆದರೂ ಇಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ. ಕಾರಣಗಳನ್ನು ಹುಡುಕಿದಾಗ, ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ ನೀತಿ ಅನುಸರಿಸುತ್ತಿದ್ದಾರೆ. ಇಲ್ಲಿನ ರೈತರು, ಹೆಚ್ಚು, ತರಕಾರಿ, ಹಣ್ಣು ಸೇರಿದಂತೆ ವಿಭಿನ್ನ ಬೆಳೆಗಳನ್ನು ಬೆಳೆದು ಪ್ರಗತಿಪರ ರೈತರು ಎನಿಸಿಕೊಂಡಿದ್ದಾರೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿಯೂ ಬಹಳಷ್ಟು ರೈತರು ಭತ್ತ ಬೆಳೆಯುತ್ತಿದ್ದಾರೆ.  ಭತ್ತ, ಕಬ್ಬು ನಂಬಿಕೊಂಡವರು ಹೊಟ್ಟೆಬಟ್ಟೆಗಷ್ಟೇ ಆದಾಯ ಕಂಡುಕೊಳ್ಳಬಹುದು.  ವಿಭಿನ್ನ ಬೆಳೆ ಬೆಳೆಯುವ ಮೂಲಕ ಕೋಲಾರ ಜಿಲ್ಲೆಯ ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.  

ಸರ್ಕಾರ ಮನೆ ಬಾಗಿಲಿಗೆ ತಲುಪಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ರೈತರಿಗೆ ನಾವು ಕೊಡಬೇಕಿದೆ.  ರೈತರಿಗೆ ಆತ್ಮಸ್ಥೈರ್ಯ, ನೈತಿಕ ಬಲ ತುಂಬಬೇಕಿದೆ.  ಸರ್ಕಾರ ಮನೆ ಬಾಗಿಲಿಗೆ ಬಂದಿದೆ ಎನ್ನುವ ಭಾವನೆ ಮೂಡುವಂತಾಗಬೇಕು.  ರೈತ ಆತ್ಮಹತ್ಯೆ ಮಾಡಿ ಕೊಳ್ಳಬಾರದು ಎಂಬ ಸಂದೇಶ ಮುಟ್ಟಿಸಬೇಕು.  

 ‘ರೈತರೊಂದಿಗೆ ಒಂದು ದಿನ’ ಪ್ರತಿ ಜಿಲ್ಲೆಯ ಒಂದು ಗ್ರಾಮದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸ ಲಾಗಿದ್ದು, ರೈತರೊಂದಿಗೆ ಸಂವಾದ ನಡೆಸಿ, ಅಲ್ಲಿನ ಮಣ್ಣು, ಸಂಸ್ಕೃತಿ, ಬೆಳೆಯ ಸಂಸ್ಕೃತಿ, ಜನರ ಬೇಕು ಬೇಡಗಳನ್ನು ತಿಳಿದುಕೊಳ್ಳಲು ಯತ್ನಿಸಲಾ ಗುವುದು. ರೈತರೊಂದಿಗೆ ಚರ್ಚಿಸಿ, ಅವರ ಸಮಸ್ಯೆ ಗಳು, ಅಹವಾಲುಗಳು, ಸಲಹೆ ಸೂಚನೆಗಳನ್ನು ಪಡೆಯಲಾಗುವುದು.  30 ಜಿಲ್ಲೆಗಳ ವರದಿಯನ್ನು ಕ್ರೋಢೀಕರಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಯತ್ನಿಸಲಾಗುವುದು ಎಂದರು.

ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಬೇಕು, ಕೋವಿಡ್ ಕಾರಣ ಯುವಕರು ಗ್ರಾಮಗಳಿಗೆ ಮರಳಿದ್ದಾರೆ.  ಯುವಕರು ಮಾರುಕಟ್ಟೆ ಪ್ರವೇಶಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಸಹಕಾರ ಸಂಘಗಳು ಸ್ಥಾಪನೆಯಾಗಬೇಕು.  ಸಹಕಾರ ಸಂಘಗಳ ಮೂಲಕ ಕೃಷಿ ಉತ್ಪನ್ನ ಮಾರಾಟವಾದಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲವಾದರೆ ನೇರ ರೈತರ ಕೈಗೆ ಲಾಭ ಸೇರಲು ಸಾಧ್ಯ ಎಂದರು.

ರೈತರು ತಾವು ಬೆಳೆದ ಬೆಳೆ ಸಂಸ್ಕರಣೆ ಮಾಡುವುದನ್ನು ಕಲಿಯದಿದ್ದರೆ ಇದೇ ಪರಿಸ್ಥಿತಿ ಮುಂದಿನ 100 ವರ್ಷಗಳಾದರೂ ಬದಲಾಗುವುದಿಲ್ಲ. ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಇದೀಗ ಹೆಚ್ಚು ಚಾಲ್ತಿಯಲ್ಲಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರೈತರು ಮುಂದಾಗಬೇಕು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ‘ರೈತರೊಂದಿಗೆ ಒಂದು ದಿನ’ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ.  ಹವಾಮಾನ ವೈಪರೀತ್ಯದಿಂದ ರೈತರ ಬಾಳು ಹಸನಾಗುತ್ತಿಲ್ಲ.  ಹೀಗಾಗಿ ಕೆರೆ ತುಂಬಿಸಿಕೊಟ್ಟರೆ ರೈತರಿಗೆ ಅನುಕೂಲವಾಗಲಿದೆ. ಹೊನ್ನಾಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಸದ್ಯದಲ್ಲೇ ರಾಜ್ಯ ಸರ್ಕಾರ ಅನುಮೋದನೆ ನೀಡಲಿದ್ದು, ಮುಖ್ಯಮಂತ್ರಿಗಳನ್ನು ಕರೆಯಿಸಿ, ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಇದು ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.

 ಹೊನ್ನಾಳಿ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದು ಕಳೆದ ವರ್ಷವೇ ಅನುಮೋದನೆ ದೊರೆಯಬೇಕಿತ್ತು.  ಆದರೆ ಕೋವಿಡ್ ಕಾರಣ ಆರ್ಥಿಕ ತೊಂದರೆಯಿಂದ ವಿಳಂಬವಾಯಿತು.  ಇದೀಗ 435 ಕೋಟಿ ರೂ. ಗಳ ಯೋಜನೆಗೆ ಅನುಮತಿ ದೊರೆತಿದ್ದು, ಶೀಘ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದರು.

ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಶ್ರೀಗಂಧದಿಂದ ಪ್ರತಿ ಎಕರೆಗೆ 10 ಕೋಟಿ ರೂ. ಆದಾಯ ಪಡೆಯಲು ಸಾಧ್ಯವಿದೆ.  ಇದಕ್ಕೆ ಬೇಕಾದ ನೆರವನ್ನು ನೀಡಲು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನಿಗಮ ಸಿದ್ಧವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್,  ಸದಸ್ಯರುಗಳಾದ ವಿ. ಶೇಖರಪ್ಪ, ಉಮಾ ರಮೇಶ್, ಎಂ.ಆರ್. ಮಹೇಶ್, ಸುರೇಂದ್ರ ನಾಯ್ಕ, ದೀಪಾ ಜಗದೀಶ್, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹಾಗೂ ಇತರರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಜಿ.ಎಂ. ಸಿದ್ಧೇಶ್ವರ್ ಸೇರಿದಂತೆ ಹಲವು ಗಣ್ಯರನ್ನು ಎತ್ತಿನಗಾಡಿಯಲ್ಲಿ ವಿಶೇಷ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು.  

ವೇದಿಕೆ ಸಮಾರಂಭಕ್ಕೂ ಪೂರ್ವದಲ್ಲಿ ಕೃಷಿ ಸಚಿವರು ಕಮ್ಮಾರಗಟ್ಟೆ ಗ್ರಾಮದಲ್ಲಿ ಶ್ರೀನಿವಾಸ ಪಾಟೀಲ್ ಎಂಬ ರೈತರು ವೈಜ್ಞಾನಿಕವಾಗಿ ಗೋಮೂತ್ರ ಸಂಸ್ಕರಿಸಿ ಲಾಭದಾಯಕವಾಗಿ ಮಾರಾಟ ಮಾಡುತ್ತಿರುವ ವಿವರ ಪಡೆದುಕೊಂಡರು, ಬಳಿಕ ಭತ್ತ ನಾಟಿ ಯಂತ್ರದ ಮೂಲಕ ಹೊಸದಲ್ಲಿ ಭತ್ತ ನಾಟಿ ಮಾಡಿದರು. ಇಲ್ಲಿನ ಹಳ್ಳಿಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಅವರಿಂದ ಅವಹಾಲು ಹಾಗೂ ಸಲಹೆಗಳನ್ನು ಪಡೆದುಕೊಂಡರು.  ಆರುಂಡಿ ಗ್ರಾಮದಲ್ಲಿ ಹೊಲದಲ್ಲಿ ನೆಲ ಸಮತಟ್ಟುಗೊಳಿಸುವ ಕೃಷಿಯಂತ್ರವನ್ನು ಚಾಲನೆ ಮಾಡಿ, ಅನುಭವ ಹಂಚಿಕೊಂಡರು.

Leave a Reply

Your email address will not be published.