ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಎಪಿಎಂಸಿ ಹಮಾಲರ ಬೆಂಬಲ

ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಎಪಿಎಂಸಿ ಹಮಾಲರ ಬೆಂಬಲ

ದಾವಣಗೆರೆ, ಜ.1- ದೆಹಲಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ಹಮಾಲಿ ಕಾರ್ಮಿಕ ಸಂಘಟನೆ ನೀಡಿರುವ ತುರ್ತು ಹೋರಾಟದ ಕರೆಯ ಮೇರೆಗೆ ವಿಘ್ನೇಶ್ವರ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಹಮಾಲರ ಸಂಘದ ನೇತೃತ್ವದಲ್ಲಿ ನಗರದಲ್ಲಿಂದು ಪ್ರತಿಭಟಿಸಲಾಯಿತು.

ಎಪಿಎಂಸಿ ಆವರಣದಲ್ಲಿ ಜಮಾಯಿಸಿದ್ದ ಸಂಘದ ಪದಾಧಿಕಾರಿಗಳು, ಕೇಂದ್ರ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯಿದೆಗಳ ಪ್ರತಿಗಳನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಹಕ್ಕುಗಳನ್ನು ಉಳಿಸುತ್ತೇವೆ, ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಪೊರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆ ಮಾಡಲಾಯಿತು.

ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಾರ್ಷಿಕ 200 ದಿನಗಳ ಕೆಲಸ ಮತ್ತು ದಿನಕ್ಕೆ 700 ರೂ. ಕೂಲಿ ನೀಡಬೇಕು, ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ವಿಸ್ತರಿಸಬೇಕು. ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಮಾಲಿ ಕಾರ್ಮಿಕ ಸಂಘದ ಹಾಲೇಶನಾಯ್ಕ, ಕುಮಾರನಾಯ್ಕ, ಬಸವರಾಜು, ಸಿಐಟಿಯು ಸಂಘದ ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published.