ಕಂಡು ಕಾಣದ ಹಾಗೆ
ಬೀದಿಗೆ ಬಿಟ್ಟೆಯ ಬ್ರಹ್ಮನೆ
ನೋಡು ನೀನೇ ಮರುಗುವೇ
ಮುದ್ದು ಮುಖದ ಹಸುಳೆಗಳ.
ಆಡುವ ವಯಸನು ಮರೆಸಿದೆ ಹಸಿವು
ಬೇಡಲು ಮನಸಿಲ್ಲದೆ ಬದಿಯಲಿ ಕುಳಿತಿಹ
ನಗುವ ಮುಖಗಳವು ಮೌನದಿ ಹೇಳಿವೆ
ನಾಳೆಯ ಚಿಂತೆಗಳ ಪರಿವಿಲ್ಲವೆಮಗೆ.
ಹರಕು ಗುಡಿಸಿಲಲಿ
ಮುರುಕು ಮುದ್ದೆಯ ಉಂಡು
ಹರಿದ ತೊಟ್ಟನು ಹೊದ್ದ ಒಡನಾಡಿಗಳ
ಕಂಡು ನೀನೇ ಮಿಡಿವ ಕಂಬನಿಯ.
ಮಂದಹಾಸವೇ ಬಲವೋ
ಜಗವ ಎದುರಿಸಿ ನಿಲ್ಲುವ ಛಲವೋ
ತಬ್ಬಿ ಹಿಡಿದಿಹ ಕೈಯಲಿ ತಂಗಿಯ
ನೋಡು ನೀನೇ ನಡುಗುವೆ.
ಎದೆಹಾಲ ಹಂಚಿಕೊಂಡವಳ
ಅಕ್ಕನ ಅಕ್ಕರೆಯೊಲವಿನ ಮುಂದೆ
ಬೇರಿಲ್ಲ ಯಾವ ಬಲವೂ.
ಕೈ ಮುಗಿದು ಬೇಡುವೆವು
ತಬ್ಬಲಿಗಳ ಕಂಡು ಕರಗಲಿ ನಿನ್ನ ಮನ
ಬಾಡದಿರಲಿ ನಗು ಅರಳುವ ಮುನ್ನ
ಕಮಲೇಶ್ವರನೇ ಕರುಣಿಸು ಕಂದಮ್ಮಗಳ.
ತಿಮ್ಮೇಶ್ ಅಣಬೇರು
9019772150
Leave a Reply