206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ

206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ

ರಾಣೇಬೆನ್ನೂರು, ನ. 23- ಎರಡು ನೀರಾ ವರಿ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ರಾಣೇಬೆನ್ನೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಗೃಹ ಸಚಿವರೂ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಹೇಳಿದರು. 

ಕೋಡಿಯಾಲ ಹೊಸಪೇಟೆಯಲ್ಲಿ ಇಂದು ಏರ್ಪಾಡಾಗಿದ್ದ ರಸ್ತೆ ಅಭಿವೃದ್ಧಿ ಜೊತೆಗೆ ರಸ್ತೆ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತುಂಗಾ ಮೇಲ್ದಂಡೆ ಯೋಜನೆಯನ್ನು ಪುನರ್ವಿಮರ್ಶೆ ನಡೆಸಿ ಆ ಮೂಲಕ ಎರಡು ಭಾಗದ ಜಮೀನುಗಳಿಗೆ ನೀರು ಕೊಡುವ ಮತ್ತು  ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಎತ್ತರಿಸುವುದ ರೊಂದಿಗೆ ಸಮಗ್ರ ಅಭಿವೃದ್ಧಿ ಮಾಡಲಾಗು ವುದು. 206 ಕೋಟಿ ರೂ. ವೆಚ್ಚದ ಎರಡು ಯೋಜನೆಗಳಿಗೆ ನೀರಾವರಿ ನಿಗಮ ಒಪ್ಪಿಗೆ ಸೂಚಿಸಿದ್ದು, ಹಣಕಾಸು ಇಲಾಖೆಗೆ ಕಡತ ಕಳಿಸಲಾಗಿದೆ. ಅಭಿವೃದ್ಧಿಯನ್ನೇ ಮೂಲ ಮಂತ್ರವಾಗಿಸಿ ಕೊಂಡಿರುವ, ಹಣಕಾಸು ಇಲಾ ಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಈ ಯೋಜನೆಗಳಿಗೆ ಮಂಜೂರಾತಿ ನೀಡಲಿದ್ದಾರೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ರಾಣೇಬೆನ್ನೂರು ನಗರದಲ್ಲಿ ಅಲ್ಪಸಂಖ್ಯಾತ ಬಾಲಕ-ಬಾಲಕಿಯರ ಪ್ರತ್ಯೇಕ ವಸತಿ ಗೃಹಗಳ ಉದ್ಘಾಟನೆ, ಕೂನಬೇವು ಬಡಾವಣೆಯಲ್ಲಿ  ಗೃಹಭಾಗ್ಯ ಯೋಜನೆಯಲ್ಲಿ ಪೌರ ಕಾರ್ಮಿಕರಿಗೆ ಮನೆಗಳ ವಿತರಣೆ, ಆಂಜನೇಯ ಬಡಾವಣೆ ಯಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ಹಿರೇಬಿದರಿ ಗ್ರಾಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯಕ್ಕೆ ಹಾಗೂ  ಸಿದ್ಧಾರೂಢ ಬಡಾವಣೆಯಲ್ಲಿ ದೇವರಾಜ ಅರಸು ವಸತಿ ನಿಲಯಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶಾಸಕ ಅರುಣಕುಮಾರ ಪೂಜಾರ ವಹಿಸಿದ್ದು, ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಆರ್‌. ಶಂಕರ್,  ಜಿ.ಪಂ. ಸದಸ್ಯೆ ಮಂಗಳಗೌರಿ ಪೂಜಾರ, ತಾ.ಪಂ.   ಅಧ್ಯಕ್ಷೆ  ಗೀತಾ ಜಾಧವ, ಉಪಾಧ್ಯಕ್ಷೆ ಕಸ್ತೂರಿ, ನಗರ ಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ರಾಜು ಅಡ್ಮನಿ, ನೂರಿ ಖಾಜಿ, ಮಣಿ ಪವಾರ ಇನ್ನಿತರರಿದ್ದರು.

Leave a Reply

Your email address will not be published.