ನಾಳೆಯಿಂದ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’

ನಾಳೆಯಿಂದ ‘ಮನೆ ಬಾಗಿಲಿಗೆ  ಮಹಾನಗರ ಪಾಲಿಕೆ’

ದಾವಣಗೆರೆ, ನ.23- ಮಹಾನಗರ ಪಾಲಿಕೆ ವ್ಯಾಪ್ತಿಯ ಜನ ಸಾಮಾನ್ಯರಿಗೆ ಪಾಲಿಕೆಯ ಸೌಲಭ್ಯಗಳು ಸಿಗುವಂತಾಗಲು ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ವಿನೂತನ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 25ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. 

ಜನನ- ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಿಗೆ, ಖಾತೆ ಬದಲಾವಣೆ, ಮನೆ ಕಂದಾಯ, ನೀರಿನ ಕಂದಾಯ, ಹೊಸ ನೀರಿನ ಸಂಪರ್ಕ, ಬೀದಿ ದೀಪ ದುರಸ್ತಿ, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಸೇವೆಗಳನ್ನು ಮನೆ ಬಾಗಿಲಿಗೆ ನೀಡುವುದು ಈ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದು ಅವರು ತಿಳಿಸಿದರು. 

ಪ್ರತಿ ವಾರ್ಡ್‍ನಲ್ಲಿ ಟೆಂಟ್ ಹಾಕಿ ಅಧಿಕಾರಿಗಳ ಸಹಿತ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು. ವಾರಕ್ಕೆ ಮೂರು ವಾರ್ಡಿನಂತೆ ಕಾರ್ಯಕ್ರಮವನ್ನು ರೂಪಿಸ ಲಾಗಿದೆ. ಇದು ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಯಾರು ಮಾಡದಿರುವ ಕಾರ್ಯ ಕ್ರಮವನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಮುಖೇನ ಹೊಸ ಆವಿಷ್ಕಾರಕ್ಕೆ ದಾವಣಗೆರೆ ನಗರ ಪಾಲಿಕೆ ಮುಂದಾಗಿದೆ. ಪಾಲಿಕೆಯಲ್ಲಿ ಮಧ್ಯವರ್ತಿಗಳಿಲ್ಲದೇ ಸೌಲಭ್ಯಗಳನ್ನು ಪಡೆಯುವಂತಾಗಲು ಜನರ ಮನೆ ಬಾಗಿಲಿಗೆ ಹೋಗಲಾಗುತ್ತದೆ. ಜನತೆ ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದವರು ಕೇಳಿಕೊಂಡರು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯೋಜನೆಗಳು ಸಮಾಜದ ಎಲ್ಲರಿಗೂ ತಲುಪಬೇಕೆನ್ನುವುದು ನನ್ನ ಗುರಿ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನೇ ಮನೆ ಬಾಗಿಲಿಗೆ ಕರೆದೊಯ್ದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜನರಿಗೆ ನೀಡಲಾಗುವುದು. ಲಂಚ ಮುಕ್ತ, ಮಧ್ಯವರ್ತಿ ಮುಕ್ತ ಪಾಲಿಕೆ ಮಾಡುವ ಉದ್ದೇಶದಿಂದ ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡಲಾಗುವುದು. ಇನ್ನು ಮುಂದೆ ಪಾಲಿಕೆಯ ಸಿಬ್ಬಂದಿಗಳು ಮಾತ್ರವೇ ಇಲ್ಲಿ ಕೆಲಸ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು. 

ನಾಡಿದ್ದು ದಿನಾಂಕ 25ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ಒಂದನೇ ವಾರ್ಡ್‍ನ ಗಾಂಧಿ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್,  ಶಾಸಕರುಗಳಾದ ಎಸ್.ರವೀಂದ್ರನಾಥ್, ಡಾ. ಶಾಮನೂರು ಶಿವಶಂಕರಪ್ಪ, ಉಪ ಮೇಯರ್ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. 

ನಗರದಲ್ಲಿ ರಸ್ತೆ ಬದಿ ಸೇರಿದಂತೆ ಖಾಲಿ ಇರುವ ಜಾಗಗಳಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೂ ಅಂದೇ ಚಾಲನೆ ನೀಡಲಾಗುವುದು. ನಗರವನ್ನು ಗ್ರೀನ್ ಸಿಟಿ ಮಾಡುವುದು ನನ್ನ ಕನಸು. ಅದಕ್ಕಾಗಿ ಈಗಾಗಲೇ 18 ಜಾತಿಯ ವಿವಿಧ ರೀತಿಯ ಅಲಂಕಾರಿಕ ಗಿಡಗಳು ಒಳಗೊಂಡಂತೆ ಒಂದು ಲಕ್ಷ ಸಸಿಗಳಿಗೆ ಟೆಂಡರ್ ಪ್ರಕ್ರಿಯೆ ನೀಡಲಾಗಿದ್ದು, ಈಗ ಒಂದು ವಾರ್ಡ್‍ಗೆ 100 ಸಸಿಗಳು ಮತ್ತು ಮುಂದಿನ ಜೂನ್ ತಿಂಗಳಿನಲ್ಲಿ ಪ್ರತಿ ವಾರ್ಡ್‍ಗೆ ಎರಡು ಸಾವಿರ ಸಸಿಗಳನ್ನು ಹಾಕಲಾಗುವುದು ಎಂದು ಅಜಯ್ ಕುಮಾರ್ ವಿವರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಬಸವರಾಜ್, ಮುಖಂಡರಾದ ನರೇಂದ್ರ ಕುಮಾರ್, ಗಿರೀಶ್, ಶ್ರೀನಿವಾಸ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.