ಜಾನಪದ ಸೊಬಗು – ಸಂಸ್ಕೃತಿ ಸಿಂಚನ ಪಸರಿಸಿದ ತಪಸ್ವಿ ಈಶ್ವರಪ್ಪ

ಜಾನಪದ ಸೊಬಗು – ಸಂಸ್ಕೃತಿ ಸಿಂಚನ ಪಸರಿಸಿದ ತಪಸ್ವಿ ಈಶ್ವರಪ್ಪ

ಹೋಟೆಲ್ ಅಪೂರ್ವ ಗ್ರೂಪ್ಸ್  ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಬಣ್ಣನೆ

ದಾವಣಗೆರೆ, ನ.22- ದಾವಣಗೆರೆಯ ಮನೆ – ಮನಗಳಲ್ಲಿ ಸಾಹಿತ್ಯ, ಜಾನಪದ ಸೊಬಗು ಹಾಗೂ ಸಂಸ್ಕೃತಿಯ ಸಿಂಚನವನ್ನು ಪಸರಿಸಿದ ಅಪರೂಪದ ತಪಸ್ವಿ ಡಾ. ಎಂ.ಜಿ. ಈಶ್ವರಪ್ಪ ಎಂದು ಹಿರಿಯ ಸಾಹಿತಿ ಎಸ್.ಟಿ. ಶಾಂತ ಗಂಗಾಧರ್ ಬಣ್ಣಿಸಿದರು.

ಚಿಗಟೇರಿ ಶ್ರೀ ನಾರದ ಮುನಿ ಟ್ರಸ್ಟ್ ಮತ್ತು ಅಪೂರ್ವ ಹೋಟೆಲ್ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಹೋಟೆಲ್ ಅಪೂರ್ವ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಜಿ. ಈಶ್ವರಪ್ಪ ಅವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಅಭಿನಂದನಾ ನುಡಿಗಳನ್ನಾಡಿದರು.

ಈಶ್ವರಪ್ಪ ಅವರಲ್ಲಿನ ಜನಪದ ಕಲೆಗಳ ಒಳ ಆತ್ಮಶಕ್ತಿಯು ದಾವಣಗೆರೆ ಜನರ ಜನಪದ ಕಲ್ಪನೆಯನ್ನು ತಲುಪಿತು. ಜೀವಂತ ಜನಪದದ ಕಥೆ, ಹಾಡು, ಸುಗ್ಗಿ ಮತ್ತು ಜೀವನದ ಅಧ್ಯಾಯನ ಮಾಡಿದ್ದಾರೆ. 

ಜನಪದರ ಬದುಕಿನ ನಡೆ-ನುಡಿ, ಆಚಾರ-ವಿಚಾರ, ಉಡುಗೆ-ತೊಡುಗೆ ಹಬ್ಬ-ಹರಿದಿನ, ಹಾಡು, ನೃತ್ಯ, ಜೋಗುಳ ಸೇರಿದಂತೆ ಬಳಕೆಯ ವಸ್ತುಗಳು, ಸಂಸ್ಕೃತಿಯ ಮೂಲ ಆಶಯ ಒಳಗೊಂಡಿರುವುದೇ ಜಾನಪದ. 

ಹೀಗೆ ಜನಪದವು ಜಾನಪದವಾದದ್ದು ಹೇಗೆಂಬುದರ ಅಧ್ಯಾಯನ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ರಂಗಭೂಮಿ ನಾಟಕಗಳು ಆಶ್ಲೀಲದ ಕಡೆ ತಿರುಗಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಹವ್ಯಾಸಿ ರಂಗಭೂಮಿ ಹುಟ್ಟು ಹಾಕಿ ನಾಟಕಕ್ಕೆ ಹೊಸ ಚೈತನ್ಯ ಕೊಟ್ಟರು.  ಶಿಷ್ಯ ಸಮೂಹಕ್ಕೆ ಜಾನದ ಜೊತೆಗೆ ಸಾಹಿತ್ಯ, ನಾಟಕದ ಕಲೆ ಯನ್ನು ಕಟ್ಟಿಕೊಟ್ಟು ದಾರಿ ದೀಪವಾಗಿದ್ದಾರೆ. ಕನ್ನಡದ ಕಂಪನ್ನು ಪಸರಿಸಿದ್ದಾರೆಂದರು.ಪ್ರಸ್ತುತ ಎಲ್ಲಾ ಸಂಸ್ಕೃತಿಗಳ ನಾಶವೇ ವ್ಯವಸಾಯದ ನಾಶಕ್ಕೆ ಕಾರಣವಾಗುತ್ತಿದೆ. ವ್ಯವಸಾಯದ ಜಾನಪದ ಯಾವತ್ತಾದರೂ ಮೂಲ ಸ್ವರೂಪದಲ್ಲಿ ಸೋತರೆ ಜಾನಪದರ ಜೀವನಕ್ಕೆ ವಿಷ ಉಣಿಸಿದಂತೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರಪ್ಪ ಅವರು,  ತಾವು ಬೆಳೆದ ಆಹಾರ ಧಾನ್ಯಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ತಮಗೆ, ಪಶು-ಪಕ್ಷಿಗೆ, ದಾನ-ಧರ್ಮಕ್ಕೆ ಹಾಗೂ ಮುಂದಿನ ವರ್ಷಕ್ಕೆ ಮೀಸಲಿಡುವುದಾಗಿ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದ್ದಾಗ ಕೃಷಿಕನೋರ್ವ ತಿಳಿಸಿದರು. ಹೀಗೆ ನಾವು ಸಹ ಪಾಲಿಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ಅವರು ಪ್ರತಿಪಾದಿಸಿದರು. 

ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ನಿರಂತರ ಅಧ್ಯಯನವಾಗದಿದ್ದರೆ ಸಾಹಿತ್ಯ ಅರಳಲು ಸಾಧ್ಯವಿಲ್ಲ. ಈಶ್ವರಪ್ಪ ಅವರು ನಿರಂತರ ಅಧ್ಯಯನದ ಮುಖೇನ ಸಾಹಿತ್ಯದ ಗಟ್ಟಿತವನ್ನು ತಿಳಿಸಿದ್ದು, ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಚಾರ ಸಂಕೀರ್ಣವಾಗಬೇಕು. 

ಈಶ್ವರಪ್ಪ ಅವರಿಗೆ ಸಿಕ್ಕಿರುವ ಪ್ರಶಸ್ತಿಯ ವಿಶ್ಲೇಷಣೆಯಾಗಬೇಕು ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪೂರ್ವ ಹೊಟೇಲ್ ಮಾಲೀಕರಾದ ಅಣಬೇರು ರಾಜಣ್ಣ, ಜನಪದ ಮತ್ತು ಸಾಹಿತ್ಯ ಸೇವೆ ಮುಖೇನ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿರುವುದರಿಂದ ಈಶ್ವರಪ್ಪ ಅವರಿಗೆ ಪ್ರಶಸ್ತಿ, ಸನ್ಮಾನ ಲಭಿಸಿದೆ. ಅವರ ಧೈರ್ಯ, ಪ್ರಯತ್ನ, ದೂರದೃಷ್ಠಿಯಿಂದ ಬೆಳೆದಿದ್ದಾರೆ. ಶ್ರಮ ಜೀವನವಿದ್ದರೆ ಯಶಸ್ಸು ಸಾಧ್ಯ. 24 ಗಂಟೆ ಉಚಿತವಾಗಿ ನಮ್ಮ ಜೇಬಿನಲ್ಲಿರುತ್ತದೆ. ಅದನ್ನು ಬಳಸಿದಂತೆ ನಮ್ಮ ಬದುಕು ಎಂದರು. 

ಕಾರ್ಯಕ್ರಮದಲ್ಲಿ ಪತ್ರಕರ್ತ ಬಿ.ಎನ್. ಮಲ್ಲೇಶ್ ಸೇರಿದಂತೆ ಇತರರು ಇದ್ದರು. ಪ್ರಹ್ಲಾದ್ ಭಟ್ ಪ್ರಾರ್ಥಿಸಿದರು. ನಾಗರಾಜ ಸಿರಿಗೆರೆ ನಿರೂಪಿಸಿದರು. ಶಾಮನೂರು ಬಸಣ್ಣ ಸ್ವಾಗತಿಸಿದರು.

Leave a Reply

Your email address will not be published.