ಒಡಲಾಳದ ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ `ಇಂತಿ ನಮಸ್ಕಾರಗಳು’ : ಅಗಸನಕಟ್ಟೆ

ಒಡಲಾಳದ ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ `ಇಂತಿ ನಮಸ್ಕಾರಗಳು’ : ಅಗಸನಕಟ್ಟೆ

ದಾವಣಗೆರೆ, ನ. 22- ನಮ್ಮ ಮನ ತಟ್ಟುವ, ನಮ್ಮನ್ನು ಘಾಸಿಗೊಳಿಸುವ, ನಮ್ಮೊಳಗೆ ತಳಮಳ ಹುಟ್ಟುಹಾಕದ ಹೊರತು ಕವಿತೆ ಸಾರ್ಥಕತೆ ಕಂಡುಕೊಳ್ಳುವುದಿಲ್ಲ ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಪ್ರತಿಪಾದಿಸಿದರು.

ಪ್ರಕೃತಿ ಪ್ರಕಾಶನ ಮತ್ತು ಕೊಡಗನೂರು ಗೆಳೆಯರ ಬಳಗ ಇವರ ಜಂಟಿ ಆಶ್ರಯದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಇಂದು ಏರ್ಪಾಡಾಗಿದ್ದ ಯುವ ಸಾಹಿತಿ ಪ್ರಕಾಶ್ ಕೊಡಗನೂರು ಅವರ `ಇಂತಿ ನಮಸ್ಕಾರಗಳು’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಕ್ಷಣಕ್ಕೆ ಬರಹಗಾರನಾಗಬೇಕು ಅಥವಾ ಸಮಾಜದಲ್ಲಿ ಕವಿ ಎಂದು ಗುರುತಿಸಿಕೊಳ್ಳಬೇಕೆಂಬ ವಾಂಛೆ ಮುಂತಾದ ಕಾರಣಗಳಿಂದಾಗಿ ಸಾಹಿತ್ಯದ ಕೃತಿ ಬರೆಯುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದರೆ, ನಿಜವಾದ ಅರ್ಥದಲ್ಲಿ ತನ್ನ ಅಂತರಂಗದ ತೊಳಲಾಟ, ತುಮುಲಗಳಿಗೆ ದನಿಯಾಗುವುದೇ ಕವಿತೆ ಎಂದು ಹೇಳಿದರು.

ಪ್ರಕಾಶ್ ಅವರ ನಿರಂತರ ಅಧ್ಯಯನ ಹಾಗೂ ಅದರಿಂದ ದೊರಕಬಹುದಾದ ಸೂಕ್ಷ್ಮತೆ ಎಲ್ಲವೂ ಕಾವ್ಯರಚನೆಯೊಳಗೆ ಕೆಲಸ ಮಾಡುವ ಪ್ರಯತ್ನ ಮಾಡಿವೆ. ನಮ್ಮ ಜಿಲ್ಲೆಯ ಕವಿಯೊಬ್ಬರು, ನಿರಂತರ ಅಧ್ಯಯನ ಶೀಲತೆಯೊಂದಿಗೆ, ಓದಿನ ಜೊತೆ ತನ್ನ ಒಡಲಾಳದ ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ವಿಶೇಷ ಎಂದು ಹೇಳಿದರು.

ವಿಮರ್ಶಕರೂ, ಸಂಸ್ಕೃತಿ ಚಿಂತಕರೂ ಆದ ಡಾ. ಸಿರಾಜ್ ಅಹ್ಮದ್ ಮಾತನಾಡಿ,  ಕವಿತೆಗಳು ಅಗ್ಗದ ಪ್ರಕಾರಗಳಲ್ಲ. ವೈಯಕ್ತಿಕ ಪ್ರೀತಿ, ಮೋಹಗಳನ್ನು ಜಗಜ್ಜಾಹೀರುಗೊಳಿ ಸಲು ಕವಿತೆಗಳ ರಚನೆ ಸಲ್ಲ. ಕವಿತೆ ನಮ್ಮ ಅಂತರಂಗದ ತಳಮಳಗಳನ್ನು ಸೂಕ್ಷ್ಮವಾಗಿ ಅಭ್ಯವ್ಯಕ್ತಿಗೊಳಿಸುವ ಕ್ರಿಯೆ ಎಂದರು.

ಪ್ರಕಾಶ್ ಕೊಡಗನೂರು ಅವರ ಕವಿತೆಗಳಲ್ಲಿ ದೈಹಿಕ ಕಾಮನೆ, ವಾಂಛೆಗಳನ್ನು ಮೀರಿ ಪ್ರೇಮ, ಮೋಹದ ಬಗ್ಗೆ ದೀರ್ಘವಾಗಿ ಧ್ಯಾನಿಸುವ ಜಿಜ್ಞಾಸೆ ನಡೆಸುವ ಸಾಲುಗಳನ್ನು ಕಾಣಬಹುದಾಗಿದೆ ಎಂದರು.

ಡಾ. ಚನ್ನೇಶ್ ಹೊನ್ನಾಳಿ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆ ಮೇಲೆ ಪ್ರಕಾಶ್ ಕೊಡಗನೂರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಂ.ಆರ್. ಯೋಗೇಶ್ವರಯ್ಯ, ಎಂ.ಟಿ. ಶರಣಪ್ಪ, ಲೋಕಣ್ಣ ಮಾಗೋಡ್ರ, ರೇವಣಕರ್ ಇತರರು ಉಪಸ್ಥಿತರಿದ್ದರು.  ನಾಗರಾಜ್ ಸ್ವಾಗತಿಸಿದರು.  ಯು. ಅರುಣಾದೇವಿ, ಭುವನ್ ಕೊಡಗನೂರು ಗೀತ ಗಾಯನ ನಡೆಸಿಕೊಟ್ಟರು.

Leave a Reply

Your email address will not be published.