ಮಕ್ಕಳ ಪ್ರತಿಭೆಯ ‘ಚಿಗುರಿಗೆ’ ಆಕರ್ಷಕ ವೇದಿಕೆ ಕೊಡಿ : ಶಾಸಕ ಎಸ್.ಎ. ರವೀಂದ್ರನಾಥ್‌ ಕರೆ

ದಾವಣಗೆರೆ, ನ. 21 – ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ರೂಪಿಸಲಾಗಿರುವ ‘ಚಿಗುರು’ ರೀತಿಯ ಕಾರ್ಯಕ್ರಮಗಳು ಕೊರೊನಾ ನಂತರದ ದಿನಗಳಲ್ಲಿ ಆಕರ್ಷಕ ವೇದಿಕೆ ಮೇಲೆ ವಿಜೃಂಭಣೆಯಿಂದ ನಡೆಯುವಂತಾಗಲಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಚಿಗುರು – ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕೊರೊನಾ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರಳವಾಗಿ ಕಾರ್ಯಕ್ರಮ ಆಯೋಜಿಸಿದೆ. ಆದರೆ, ಟಿ.ವಿ.ಗಳಲ್ಲಿ ಮಕ್ಕಳ ಕಾರ್ಯಕ್ರಮಗಳನ್ನು ಚೆನ್ನಾಗಿ ತೋರಿಸುವುದರಿಂದ ಅದೇ ರೀತಿಯ ವೇದಿಕೆಯ ನಿರೀಕ್ಷೆ ಮಕ್ಕಳಲ್ಲಿ ಇರುತ್ತದೆ. ಅದನ್ನು ಇಲಾಖೆ ಪರಿಗಣಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ದೀಪಾ ಜಗದೀಶ್ ಅವರು, ಕೊರೊನಾ ಕಾರಣದಿಂದಾಗಿ ಶಾಲಾ ಮಕ್ಕಳಿಗೆ ನಡೆಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನೆರವೇರಿಸಲು ಈ ಬಾರಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿನ ವಿಶೇಷ ಪ್ರತಿಭೆ ಗುರುತಿಸಲು ಚಿಗುರು ಕಾರ್ಯಕ್ರಮ ಸಹಕಾರಿಯಾಗಲಿ ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ ಕುರ್ಕಿ ಮಾತನಾಡಿ, ಮಕ್ಕಳಲ್ಲಿ ಆಸ್ತಿ ಮಾಡುವುದ ಕ್ಕಿಂತ ಹೆಚ್ಚಾಗಿ ಚಿಕ್ಕಂದಿನಿಂದಲೇ ವಿವೇಕ, ನಡೆ – ನುಡಿ ಬಿತ್ತಬೇಕು. ಅಕ್ಕರೆಯಿಂದ ಸಂಸ್ಕೃತಿಯ ತುತ್ತು ಧಾರೆ ಎರೆಯಬೇಕು. ಇದರಿಂದಾಗಿ ಮಕ್ಕಳು ಹಾಗೂ ಪೋಷಕರ ನಡುವಿನ ಸಂಬಂಧ ದೃಢವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರನ್ನು ಆತ್ಮಹತ್ಯೆಯಿಂದ ರಕ್ಷಿಸಿದ ನಗರದ ಸುಶಾಂತ್ ರೆಡ್ಡಿ ಹಾಗೂ ಪ್ರಣೀತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು

ವೇದಿಕೆಯ ಮೇಲೆ ಜಿ.ಪಂ. ಉಪಾಧ್ಯಕ್ಷರಾದ ಸಾಕಮ್ಮ ಗಂಗಾಧರ ನಾಯ್ಕ, ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪೆ, ಕ.ಸಾ.ಪ. ಗೌರವ ಕಾರ್ಯದರ್ಶಿ ದಿಳ್ಳೆಪ್ಪ ಬಸಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಉಪಸ್ಥಿತರಿದ್ದರು.

Leave a Reply

Your email address will not be published.