ಕೃಷಿಯಲ್ಲಿ ಯುವಕರನ್ನು ಆಕರ್ಷಿಸುವ ಯೋಜನೆಗಳು ಬರಲಿ

ದಾವಣಗೆರೆ, ನ.21- ಕೃಷಿ ಮಣ್ಣನ್ನು ಒಳಗೊಂಡ ಒಂದು ಪ್ರಕ್ರಿಯೆ. ರೈತ ಮಣ್ಣಿನ ಜೊತೆ ನಿರಂತರ ಸಂಪರ್ಕ ಹೊಂದಿದಾಗ ಮಾತ್ರ ಕೃಷಿ ಕೆಲಸ ಸುಗಮವಾಗಿ ಸಾಗಲು ಸಾಧ್ಯ  ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಕೆ. ಸಿರಾಜ್ ಅಹಮದ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್  65ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ  ಹಮ್ಮಿಕೊಂಡ ಅಂತರ್ಜಾಲ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ `ಭಾರತದ ಕೃಷಿ ಕ್ಷೇತ್ರ ಸ್ವಾವಲಂಬನೆಯಿಂದ ಪರಾವಲಂಬನೆ ಕಡೆಗೆ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಭಾರತೀಯ ಪರಂಪರೆಯಲ್ಲಿ ಆರಂಭದಿಂದಲೂ ಕೃಷಿ ಪೂಜ್ಯನೀಯ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ  ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ನಲುಗಿ ಹೋಗಿದೆ. ಇದರಿಂದಾಗಿ ಕೃಷಿ ಮೇಲಿದ್ದ ವಿಶ್ವಾಸ ಕಡಿಮೆಯಾಗುತ್ತಾ ಸಾಗುತ್ತಿದೆ ಎಂದು ಹೇಳಿದರು.

ಸಂಸ್ಕರಣಾ ಘಟಕಗಳ ಸ್ಥಾಪನೆ, ಮೆಕ್ಕೆಜೋಳ ಉತ್ಪಾದನೆಗೆ ಬೇಕಾದ ಪೂರಕ ಸೌಲಭ್ಯಗಳು, ಮಾವಿನ ಉಪ ಉತ್ಪಾದನೆ ಹೀಗೆ ಬೆಳೆಗಳ ಜೊತೆಗೆ ಇನ್ನೂ ಹಲವು ಬೆಳೆಗಳಿಗೆ ನಮ್ಮಲ್ಲೇ ಸಂಸ್ಕರಣಾ ಘಟಕ ಅಥವಾ ಬೆಳೆಗಳಿಗೆ ಪೂರಕ ರೂಪುರೇಷೆ ನೀಡಿದ್ದೇ ಆದರೆ ನಮ್ಮ ಕೃಷಿ ಪರಾವಲಂಬನೆ ಯಿಂದ ಪಾರಾಗಬಹುದು ಎಂದು ತಿಳಿಸಿದರು.

ಯುವಕರನ್ನು ಆಕರ್ಷಿಸುವ ಯೋಜನೆ ಗಳು ಕೃಷಿಯಲ್ಲಿ ನಿರ್ಮಾಣವಾಗಬೇಕಾಗಿದೆ. ರೈತರು ಬೆಳೆದ ವಸ್ತುಗಳಿಗೆ ಸೂಕ್ತವಾದ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವಲ್ಲಿ ನಮ್ಮ ಯುವಕರು ಬಹಳ ದೂರ ಸರಿದಿದ್ದಾರೆ. ಇದು ತುಂಬಾ ವಿಷಾದಕರ ಸಂಗತಿ ಎಂದರು.

ತಾ.ಕ.ಸಾ.ಪ. ಅಧ್ಯಕ್ಷ ಬಿ.ವಾಮದೇವಪ್ಪ ಅವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ರೈತ ಪರ ಚಿಂತನೆಗಳು ನಮ್ಮ ದೇಶದಲ್ಲಿ ಹೆಚ್ಚಾಗಬೇಕಿದೆ ಎಂದು ಹೇಳಿದರು. ಆರಂಭದಲ್ಲಿ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ಕಲಾ ಕುಂಚ ಸಾಂಸ್ಕೃತಿಕ ತಂಡದ ಕಲಾವಿದರು  ಕಾರ್ಯಕ್ರಮದಲ್ಲಿ  ಯಕ್ಷಗಾನ ನಡೆಸಿಕೊಟ್ಟರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published.