ಹರಪನಹಳ್ಳಿಯ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಲೋಟ, ತಟ್ಟೆ, ಸೋಪು

ಹರಪನಹಳ್ಳಿಯ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಲೋಟ, ತಟ್ಟೆ, ಸೋಪು

ಹರಪನಹಳ್ಳಿ, ನ. 18- ಪಟ್ಟಣದ ಪದವಿ ಕಾಲೇಜು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ತಂಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ಭೀಮಪ್ಪ ಹೇಳಿದರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ವಸತಿ ನಿಲಯದ ಸಿಬ್ಬಂದಿಗಳಿಗೆ ಕೋವಿಡ್ ವೈರಾಣು ಪರೀಕ್ಷೆಯ ಗಂಟಲು ದ್ರವ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಟ್ಟು 8 ವಸತಿ ನಿಲಯಗಳು ಲಭ್ಯವಿದ್ದು,  ಒಂದು ಕೋಣೆಯಲ್ಲಿ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಮಾತ್ರ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಲೋಟ, ತಟ್ಟೆ, ಸೋಪು ಒದಗಿಸಲಾಗುವುದು. ವಿದ್ಯಾರ್ಥಿಗಳೇ ತಮ್ಮ ಲೋಟ, ತಟ್ಟೆ ಶುದ್ಧ ಮಾಡಿಕೊಂಡು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗುವುದು ಎಂದರು.

ವಸತಿ ನಿಲಯಕ್ಕೆ ಒಂದೇ ಪ್ರವೇಶ ದ್ವಾರವಿದ್ದು, ಒಳ ಪ್ರವೇಶಿಸುವಾಗ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಯೂ ಕಾಲೇಜಿನಿಂದ ಹಾಗೂ ಪೋಷಕರಿಂದ ದೃಢೀಕರಣ ಪತ್ರ ನೀಡಿ ವಸತಿ ನಿಲಯಕ್ಕೆ ಪ್ರವೇಶ ಪಡೆಯಬೇಕು ಎಂದು ಭೀಮಪ್ಪ ಹೇಳಿದರು.

ನಿಲಯ ಪಾಲಕ ಚಂದ್ರಪ್ಪ ಮಾತನಾಡಿ, 40 ಸಿಬ್ಬಂದಿಗಳ ಹಾಗೂ 64 ವಿದ್ಯಾರ್ಥಿಗಳ ಕೋವಿಡ್ ವೈರಾಣು ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ ಮಾಡಲಾಗುವುದು. ನೆಗೆಟಿವ್ ವರದಿ ಬಂದ ನಂತರ ವಸತಿ ನಿಲಯಕ್ಕೆ ಪ್ರವೇಶ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಶೀತ, ಕೆಮ್ಮು ಹಾಗೂ ಜ್ವರ ಕಂಡು ಬಂದರೆ ಚಿಕಿತ್ಸೆ ನೀಡಲು ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿದೆ ಎಂದರು.

ಸಿಬ್ಬಂದಿಗಳಾದ  ಜುಂಜಪ್ಪ, ವೀರಣ್ಣ ಮತ್ತಿಹಳ್ಳಿ, ಪ್ರೇಮಾವತಿ, ಶಿವಲೀಲಾ, ರಂಗಸ್ವಾಮಿ, ಆರೋಗ್ಯ ಇಲಾಖೆಯ ಖಲಂದರ್, ಇರ್ಫಾನ್‌ ಭಾಷಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.