ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಳಕ್ಕೆ ಉಪಸಮಿತಿ

ಬಳ್ಳಾರಿ ವಿಭಜನೆ, 31ನೇ ಜಿಲ್ಲೆಯಾಗಿ ವಿಜಯನಗರ ರಚನೆ

ಬೆಂಗಳೂರು, ನ. 18 – ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸಚಿವ ಸಂಪುಟದ ಉಪಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ. 

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಈ ವಿಷಯ ತಿಳಿಸಿದ್ದಲ್ಲದೆ, ಒಂದು ವಾರದಲ್ಲಿ ಸಮಿತಿ ರಚನೆಯಾಗಲಿದ್ದು, ಸಮಿತಿಯಲ್ಲಿ ಯಾರಿರಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ನ್ಯಾಯಮೂರ್ತಿ ನಾಗ ಮೋಹನದಾಸ್ ಸಮಿತಿಯ ವರದಿ ಅನ್ವಯ ಉಪಸಮಿತಿ ತೀರ್ಮಾನ ಕೈಗೊಳ್ಳಲಿದೆ.

ಪರಿಶಿಷ್ಟ ಜಾತಿಗೆ ಶೇ. 13 ರಿಂದ 15ಕ್ಕೆ, ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 5 ರಿಂದ 7ಕ್ಕೆ ಮೀಸಲು ಹೆಚ್ಚಳ ಮಾಡುವ ಬೇಡಿಕೆ ಇತ್ತು. ಕೆಲವು ಗೊಂದಲಗಳು ಇದ್ದ ಕಾರಣ ಮೀಸ ಲಾತಿ ಹೆಚ್ಚಳ ಮಾಡುವ ಸಂಬಂಧ ಉಪಸಮಿತಿ ರಚನೆ ಮಾಡಿ, ಸಮಿತಿ ನೀಡುವ ತೀರ್ಮಾನವನ್ನು ಮುಂದೆ ಸರ್ಕಾರ ಅನು ಷ್ಠಾನಗೊಳಿಸುವ ಬಗ್ಗೆ ನಿರ್ಧಾರ ಮಾಡಲಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆ ಸೇರಿದಂತೆ ಕೆಲವು ತಾಲ್ಲೂಕು ಗಳನ್ನೂ ಒಳಗೊಂಡಂತೆ ವಿಜಯನಗರ ಜಿಲ್ಲೆ ನಿರ್ಮಾಣಕ್ಕೆ ಸಂಪುಟ ಅಸ್ತು ನೀಡಿದೆ. 

ಹೊಸ ಜಿಲ್ಲೆಗೆ ಯಾವ ತಾಲ್ಲೂಕುಗಳು ಮತ್ತು ಪಂಚಾಯಿತಿಗಳನ್ನು ಸೇರಿಸಬೇಕು, ಅದರ ವ್ಯಾಪ್ತಿ ಮತ್ತು ವಿಸ್ತೀರ್ಣ ಎಷ್ಟಿರಬೇ ಕೆಂಬುದರ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. 

ನಂತರ ಬಳ್ಳಾರಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಮ್ಮತದಿಂದ ವಿಜಯ ನಗರ ಜಿಲ್ಲಾ ಸ್ಥಾಪನೆಗೆ ಸಮ್ಮತಿಸಿದ್ದಾರೆ ಎಂದು ರಾಮುಲು ಇದೇ ಸಂದರ್ಭದಲ್ಲಿ ತಿಳಿಸಿದರು. 

ಮರಾಠ ಸಮುದಾಯ ನಿಗಮ ಸ್ಥಾಪಿಸಲು ಸಂಪುಟ ಸಮ್ಮತಿಸಿದೆ. ಈ ನಿಗಮಕ್ಕೆ ಎಷ್ಟು ಹಣ ನಿಗದಿ ಮಾಡಬೇಕೆಂಬುದರ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಿಗಮ ಮಾಡುತ್ತದೆಯೇ ಹೊರತು, ಪ್ರಾಧಿಕಾರ ರಚನೆ ಮಾಡುತ್ತಿಲ್ಲ ಎಂದವರು ಸ್ಪಷ್ಟಪಡಿಸಿದರು. 

ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಕೆಲವು ನಿರ್ಧಾರ ತೆಗೆದುಕೊಂಡಾಗ ಪರ, ವಿರೋಧ ಕೇಳಿ ಬರುತ್ತದೆ. ಆದರೂ ಅಭಿವೃದ್ದಿ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.