ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬಿಎಸ್‌ವೈ ಆದೇಶ

ಮರಾಠ ಪ್ರಾಧಿಕಾರ ರಚನೆ ಬೆನ್ನಲ್ಲೇ ಮಹತ್ವದ ಕ್ರಮ ಕೈಗೊಂಡ ಮುಖ್ಯಮಂತ್ರಿ

ಬೆಂಗಳೂರು, ನ. 17 – ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ್ದಾರೆ. 

ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬೀದರ್‍ನ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಯವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಆದೇಶ ಹೊರಡಿಸಿದ್ದರು. 

ರಾಜ್ಯದ ಮರಾಠಿಗರಿಗಾಗಿ ಇಂತಹ ಪ್ರಾಧಿಕಾರ ರಚನೆ ಮಾಡಿದ್ದಕ್ಕೆ ಪರ, ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಯಡಿಯೂರಪ್ಪ ಸಂಪುಟದಲ್ಲಿರುವ ಉಪಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಸೋಮಣ್ಣ ಹಾಗೂ ಬಿ.ಸಿ. ಪಾಟೀಲ್ ವೀರಶೈವ ಸಮುದಾಯದ ಏಳಿಗೆಗಾಗಿ ನಮ್ಮ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.  ಸಹೋದ್ಯೋಗಿ ಗಳು ಒತ್ತಡ ಹೇರಿದ 24 ಗಂಟೆಯೊಳಗಾಗಿ ಮುಖ್ಯಮಂತ್ರಿ ಯವರು ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇಂದು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಈ ಸಮಾಜದ ಜನಾಂಗದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ. 

ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇಂತಹ ನಿಗಮವನ್ನು ಸ್ಥಾಪಿಸುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿಯವರು ಮುಖ್ಯಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 

ಅಷ್ಟೇ ಅಲ್ಲ ತಕ್ಷಣದಿಂದ ಜಾರಿಗೆ ಬರುವಂತೆ ಈ ನಿಗಮವನ್ನು ಸ್ಥಾಪನೆ ಮಾಡಬೇಕೆಂದು ಮುಖ್ಯಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. 

ಮುಖ್ಯಮಂತ್ರಿಯವರು ಕಳೆದ 48 ಗಂಟೆಗಳಲ್ಲಿ ಒಂದು ಮರಾಠಿಗರಿಗೆ ಮತ್ತು ವೀರಶೈವ – ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳಲು ಇಂತಹ ಅಭಿವೃದ್ಧಿ ನಿಗಮಗಳನ್ನು ರಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಮುಂದೆ ನಡೆಯುತ್ತಿರುವ ಉಪಚುನಾವಣೆಯ ಕ್ಷೇತ್ರಗಳಲ್ಲೂ ಮರಾಠಿಗರ ಜೊತೆಗೆ ವೀರಶೈವ – ಲಿಂಗಾಯತ ಸಮುದಾಯದ ಮತದಾರರೇ ನಿರ್ಣಾಯಕರಾಗುತ್ತಾರೆ.  ಮುಖ್ಯಮಂತ್ರಿಯವರು ತಮ್ಮ ಕೋರಿಕೆಗೆ ತಕ್ಷಣವೇ ಸ್ಪಂದಿಸಿದ್ದಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹರ್ಷ ವ್ಯಕ್ತಪಡಿಸಿದ್ದಾರೆ. 

ನಿನ್ನೆಯಷ್ಟೇ  ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು, ವೀರಶೈವ ಲಿಂಗಾಯತರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.