ಆಟೋ ಬಾಡಿಗೆ ಜಗಳ : ಚಾಕು ಇರಿತ

ದಾವಣಗೆರೆ, ನ.17- ಆಟೋ ಬಾಡಿಗೆ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಜಗಳ ನಡೆದು ಓರ್ವನನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಸ್ಥಳೀಯ ಬೇತೂರು ರಸ್ತೆಯ ಎ.ಕೆ. ಕಾಲೋನಿ ಬಳಿ ಸೋಮವಾರ ನಡೆದಿದೆ. 

ಮುದ್ದಾಭೋವಿ ಕಾಲೋನಿಯ ಸೈಯದ್ ಅಲಿ ಚಾಕು ಇರಿತಕ್ಕೆ ಒಳಗಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರ ತಾಹೀರ್ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಬಾಡಿಗೆ ಆಟೋ ನಡೆಸುತ್ತಿದ್ದ ಸೈಯದ್ ಅಲಿ ಎ.ಕೆ. ಕಾಲೋನಿಗೆ ಬಂದಾಗ ಬೇರೊಂದು ಕೋಮಿನ ಯುವಕರು ಈ ಬಡಾವಣೆಗೆ ಬಾರದಂತೆ ತಾಕೀತು ಮಾಡಿದರು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಎರಡೂ ಗುಂಪಿನ ನಡುವೆ ಜಗಳ ನಡೆದಿದೆ. 

ಈ ಸಂಬಂಧ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.