ಅಡಿಕೆ, ಜಾನುವಾರು ಕಳ್ಳರ ಬಂಧನ : 6.44 ಲಕ್ಷ ರೂ. ಮೌಲ್ಯದ ಮಾಲು ವಶ

ಅಡಿಕೆ, ಜಾನುವಾರು ಕಳ್ಳರ ಬಂಧನ : 6.44 ಲಕ್ಷ ರೂ. ಮೌಲ್ಯದ ಮಾಲು ವಶ

ದಾವಣಗೆರೆ, ನ.15-  ರೈತರು ಬೆಳೆದ ಅಡಿಕೆ, ಸಾಕಿದ ಹಸು-ಕರುಗಳನ್ನು ಕಳವು ಮಾಡುತ್ತಿದ್ದ ದಾವಣಗೆರೆ-ಹಾವೇರಿ ಜಿಲ್ಲೆಗಳ 6 ಮಂದಿ ಆರೋಪಿಗಳನ್ನು ಬಂಧಿಸಿ, 6.44 ಲಕ್ಷ ರೂ. ಮೌಲ್ಯದ ಅಡಿಕೆ, ಹಣ ಹಾಗೂ ಬೊಲೆರೋ ವಾಹನವನ್ನು ಮಲೇಬೆನ್ನೂರು ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ.

ಹಿರೇಕೆರೂರು ತಾಲ್ಲೂಕಿನ ಮಾಸೂರು ಗ್ರಾಮದವರೆನ್ನಲಾದ ರಾಜಾಸಾಬ್, ರಟ್ಟಿಹಳ್ಳಿ ವಾಸಿ ರಾಜ ಮೊಹಮ್ಮದ್, ಈರಾಪುರದ ಅಬ್ದುಲ್, ಹರಿಹರ ತಾಲ್ಲೂಕಿನ ಗುತ್ತೂರು ಕಾಲೋನಿಯವರೆನ್ನಲಾದ ಸಲೀಂ, ಗಂಗನರಸಿ ಗ್ರಾಮದ ವಾಸಿಗಳೆನ್ನಲಾದ ರಫೀಕ್, ಶೌಕತ್ ಅಲಿ ಬಂಧಿತ ಆರೋಪಿಗಳು.

ಮಲೇಬೆನ್ನೂರು ಠಾಣೆ ವ್ಯಾಪ್ತಿಯ ನಂದಿತಾವರೆ ಗ್ರಾಮದಲ್ಲಿ ಕಳವು ಮಾಡಿದ್ದ 95 ಕ್ವಿಂಟಾಲ್ ಅಡಿಕೆ, ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ ಕಳವು ಮಾಡಿದ್ದ 4.5 ಕ್ವಿಂಟಾಲ್ ಅಡಿಕೆ, ಹರಿಹರ ನಗರದಲ್ಲಿ ಹಸು-ಕರುವನ್ನು ಕಳ್ಳತನ ಮಾಡಿ, ಮಾರಾಟ ಮಾಡಿ ಉಳಿದಿದ್ದ 24 ಸಾವಿರ ರೂ.ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಮಲೇಬೆನ್ನೂರು, ದಾವಣಗೆರೆ ಗ್ರಾಮಾಂತರ ಠಾಣೆ, ಹರಿಹರ ನಗರ ಠಾಣೆ ವ್ಯಾಪ್ತಿಯ ಅಡಿಕೆ ಕಳುವು, ಹಸು-ಕರು ಕಳವಿನ ಒಟ್ಟು 3 ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

ನಂದಿತಾವರೆ ಗ್ರಾಮದ ರೈತ ಬಿ.ಪಿ. ಬಸವಲಿಂಗಪ್ಪ ಗೌಡ ಎಂಬಾತ ತನ್ನ ತೋಟದಲ್ಲಿ ಬೆಳೆದಿದ್ದ ಅಡಿಕೆ ಕಳ್ಳತನವಾದ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ, ಸಿಪಿಐ ಶಿವಪ್ರಸಾದ ನೇತೃತ್ವದಲ್ಲಿ ಎಸ್‍ಐ ವೀರಬಸಪ್ಪ ಕುಸಲಾಪುರ, ಎಎಸ್‍ಐ ಯಾಸಿನ್‍ವುಲ್ಲಾ, ಸಿಬ್ಬಂದಿಗಳಾದ ಕೆ.ಶಿವಕುಮಾರ, ಆರ್.ಲಕ್ಷ್ಮಣ, ರಾಜಶೇಖರ, ಟಿ.ಬಸವರಾಜ, ಮೂರ್ತಿ, ಸಂತೋಷಕುಮಾರ, ದ್ವಾರಕೀಶ, ನಾಗಪ್ಪ ಕಡೇಮನಿ, ರವಿ, ವೆಂಕಟೇಶರನ್ನು ಒಳಗೊಂಡ ವಿಶೇಷ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.