ದೈವದ ಚಿಂತನೆ ನನ್ನ ಕಾವ್ಯಗಳ ಮುಖ್ಯವಾದ ವಸ್ತು : ಡಾ.ಹೆಚ್.ಎಸ್.ವಿ

ದಾವಣಗೆರೆ, ನ.13- ಸುಮಾರು ಆರು ದಶಕಗಳಿಂದ ಕಾವ್ಯ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ವಿಮರ್ಶೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ, ನನಗೆ ವಿಶೇಷವಾಗಿ ಪ್ರಿಯವಾದದ್ದು ಕಾವ್ಯ ಮಾಧ್ಯಮ ಎಂದು ಖ್ಯಾತಕವಿ ಡಾ. ಹೆಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.

ಗ್ರಂಥ ಸರಸ್ವತಿ ಪ್ರತಿಭಾರಂಗ ನಡೆಸುತ್ತಿರುವ ಕನ್ನಡಕಬ್ಬ ಯುಗಾದಿಹಬ್ಬ ಅಂತರ್ಜಾಲಿತ ಕಾರ್ಯ ಕ್ರಮದ ಏಳನೇ ದಿನದ ಉಪನ್ಯಾಸ ಕಾರ್ಯಕ್ರಮ ದಲ್ಲಿ  ಖ್ಯಾತ ಕವಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರು  `ನಾನು ಮತ್ತು ನನ್ನ ಕವಿತೆ’ ಎಂಬ ವಿಷಯವನ್ನು ಕುರಿತು ಮಾತನಾಡಿದರು.

ದೈವದ ಚಿಂತನೆ ನನ್ನ ಕಾವ್ಯಗಳಲ್ಲಿ ಮುಖ್ಯ ವಾದ ವಸ್ತು. ನಮ್ಮನ್ನು ಕಾಪಾಡುವ ಶಕ್ತಿಯನ್ನು ಆರಾಧನೆ ಮಾಡುವುದು ನನ್ನ ಕವಿತೆಯ ಸ್ವರೂಪ ಅಲ್ಲ. ದೈವ ಅನ್ನುವುದು ಅದ್ಭುತವಾದ ಮನುಷ್ಯನ ಮನಸ್ಸು ನಿರ್ಮಿಸಿದ ಶಕ್ತಿ ವಿಶೇಷ. ನಾವೇ ನಿರ್ಮಿಸಿದ ಇದು ನಮಗೆ ಹೇಗೆ ಶಾಂತಿಯನ್ನು, ಸಮಾಧಾನವನ್ನು, ಕ್ಷಮತೆಯನ್ನು ನೀಡುತ್ತದೆ ಎಂಬುದನ್ನು ನನ್ನ ಕವಿತೆಗಳು ಹೇಳುತ್ತವೆ ಎಂದು ಅವರು ತಿಳಿಸಿದರು.

`ಪ್ರಾಚೀನ ಕವಿಗಳ ಕವಿತೆಗಳಲ್ಲಿ ಕನ್ನಡ ನಾಡುನುಡಿಯ ವರ್ಣನೆ’ ಕುರಿತು ಮಾತನಾಡಿದ ಶಿವಕುಮಾರಸ್ವಾಮಿ ಕುರ್ಕಿ ಅವರು, ಕವಿರಾಜ ಮಾರ್ಗಕಾರ ಶ್ರೀವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ಥರಲ್ಲದಿದ್ದರೂ ಕಾವ್ಯಪ್ರಯೋಗ ಪರಿಣತರಾಗಿದ್ದರು ಎಂದಿದ್ದಾನೆ. 

ನಯಸೇನನು ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯ ಆಗುವುದನ್ನು  ಸಹಿಸದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸಿದ್ದಾನೆಂದು ಶಿವಕುಮಾರಸ್ವಾಮಿ ಅವರು ಕವಿಗಳ ಕಾವ್ಯಗಳನ್ನು ರಾಗವಾಗಿ ಹಾಡಿ ಸರಳವಾಗಿ ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, ಮಹಲಿಂಗ ರಂಗಕವಿ ಕನ್ನಡವು ಹೇಗೆ ಸರಳ, ಸುಂದರ ಎಂಬುದನ್ನು ಹಲವು ಉಪಮೆಗಳೊಂದಿಗೆ ಹೊಗಳಿ ಸಂಸ್ಕೃತಕ್ಕಿಂತ ಕನ್ನಡ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾರೆ. 

ಹಾಗೆಯೇ ಆಂಡಯ್ಯ ಕವಿ ಕನ್ನಡ ನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ವರ್ಣಿಸುತ್ತಾನೆ. ಹೀಗೆ ಕನ್ನಡ ನಾಡಿನ ಪ್ರಕೃತಿ, ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಪ್ರಾಚೀನ ಕವಿಗಳು ವರ್ಣಿಸಿದ್ದಾರೆ ಎಂದು ತಿಳಿಸಿದರು.

‌ಗಾಯಕಿ ವಿ.ಎಸ್.ಮಾನಸ, ಡಾ.ಹೆಚ್ಚೆಸ್ವಿ ಅವರ ಭಾವಗೀತೆಗಳನ್ನು ಹಾಡಿದರು. ಶ್ರೀಮತಿ ಐಶ್ವರ್ಯ ವೈಶ್ರವಣ ಅವರು ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು.

Leave a Reply

Your email address will not be published.