ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಆಗ್ರಹ

ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ಆಗ್ರಹ

ದಾವಣಗೆರೆ,ನ.13- ಟೈಲರ್ ವೃತ್ತಿ ಮಾಡುತ್ತಿರುವ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಟೈಲರ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್ ವತಿಯಿಂದ ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಎದುರು ಫೆಡರೇಷನ್ ನೇತೃತ್ವದಲ್ಲಿ ಜಮಾಯಿಸಿದ್ದ ಟೈಲರ್‍ಗಳು ಮತ್ತು ಅವರ ಸಹಾಯಕರು, ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಷನ್‍ನ ರಾಜ್ಯ ಕಾರ್ಯದರ್ಶಿ ಆವರಗರೆ ಚಂದ್ರು, ಕರ್ನಾಟಕ ರಾಜ್ಯಾದ್ಯಂತ ಟೈಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರಲಿದ್ದು, ಇವರು ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲದೇ ಬಳಲುತ್ತಿದ್ದಾರೆ ಎಂದು ಆರೋಪಿಸಿದರು.

ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಬಟ್ಟೆ ಹೊಲಿಯುವ ಟೈಲರ್‍ಗಳು ಮತ್ತು ಸಹಾಯಕರು, ಸಣ್ಣ ಗಾರ್ಮೆಂಟ್‌ಗಳಲ್ಲಿ ಟೈಲರಿಂಗ್ ವೃತ್ತಿ ಮಾಡುವವರ ಸಂಖ್ಯೆ ರಾಜ್ಯದಲ್ಲಿ 20 ಲಕ್ಷದಷ್ಟಿದೆ ಎಂಬುದಾಗಿ ಅಂದಾಜಿಸಲಾಗಿದೆ. ಇವರ ಪೈಕಿ ಬಹುತೇಕರು ಪ್ರೌಢ ಶಿಕ್ಷಣ, ಪಿಯುಸಿ, ಪದವಿ ಪಡೆದವರು ಇದ್ದು, ಇವರಾರೂ ಸಹ ತಮಗೆ ಸರ್ಕಾರಿ ನೌಕರಿ ಸಿಗಲಿ ಎಂಬುದಾಗಿ ಕಾಯುತ್ತಾ ಕೂರದೇ ಟೈಲರ್ ವೃತ್ತಿ ಕೈಗೊಂಡು
ಸ್ವಾವಲಂಬಿ ಗಳಾಗಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಇವರು ಕಾರ್ಮಿಕ ಕಾಯ್ದೆಗೆ ಒಳಪಡದೇ ಇರುವುದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಜೀವನ ನಡೆಸುವುದು ದುಸ್ತರವಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಸಿ.ರಮೇಶ್, ರಾಜ್ಯ ಸಂಚಾಲಕ ಗದಿಗೇಶ ಪಾಳೇದ್, ಮುಖಂಡರಾದ ಪುಷ್ಪಾ, ಯಶೋಧ, ಸರೋಜಾ, ಶಾಂತಕುಮಾರ್, ಮಂ ಜುಳಾ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published.