ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲು ತೆರೆಯಲು ವಿರೋಧ

ಬೀರಲಿಂಗೇಶ್ವರ ದೇವಸ್ಥಾನದ  ಬಾಗಿಲು ತೆರೆಯಲು ವಿರೋಧ

ಹಳೇ ಅರ್ಚಕನ ಬಂಧನ: ದೇವಸ್ಥಾನದ ಬಾಗಿಲು ತೆಗೆಸಿ ಹೊಸ ಅರ್ಚಕರಿಂದ ಪೂಜೆ ಮಾಡಿಸಿದ ಜಿಲ್ಲಾಡಳಿತ

ದಾವಣಗೆರೆ, ನ.7- ನಗರದ ಪಿಬಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಬಾಗಿಲು ತೆಗೆಯಲು ವಿರೋಧ ವ್ಯಕ್ತಪಡಿಸಿದ್ದ ಹಳೇ ಅರ್ಚಕ ಮತ್ತವರ ಸಂಬಂಧಿಕರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ದೇವಸ್ಥಾನದ ಬಾಗಿಲು ತೆಗೆಸಿ ಹೊಸ ಅರ್ಚಕರಿಂದ ಜಿಲ್ಲಾಡಳಿತವು ಪೂಜೆ ಮಾಡಿಸಿರುವ ಘಟನೆ ಇಂದು ನಡೆಯಿತು. 

ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಅರ್ಚಕರಾಗಿದ್ದ ಬಿ.ಜಿ. ಲಿಂಗೇಶ್ ವಿರುದ್ಧ ಕೆಲ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅರ್ಚಕ ಲಿಂಗೇಶ್ ನನ್ನು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಕಾರಣದಿಂದ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಬೀರಲಿಂಗೇಶ್ವರ ದೇವಸ್ಥಾನದ  ಬಾಗಿಲಿಗೆ ಬೀಗ ಬಿದ್ದು, ಪೂಜೆ ಸ್ಥಗಿತಗೊಂಡಿದ್ದವು. 

ಇಂದು ಬೆಳಗಿನ ಜಾವ ಕಂದಾಯ ನಿರೀಕ್ಷಕರು ಮುಜರಾಯಿ ಇಲಾಖೆ ನೇಮಿಸಿರುವ ಹೊಸ ಅರ್ಚಕನೊಂದಿಗೆ ದೇವಸ್ಥಾನದ ಬೀಗ ತೆರೆಯಲು ಆಗಮಿಸಿದ್ದರು. ಪ್ರಕರಣ ಇನ್ನೂ ಹೈಕೋರ್ಟ್‍ನಲ್ಲಿದೆ. ಹೀಗಾಗಿ ಬೀಗ ತೆರೆದು ಪೂಜೆ ನಡೆಸಲು ಅನುವು ಮಾಡಿಕೊಡುವುದಿಲ್ಲ ಎಂದು ಅಲ್ಲಿಯೇ ವಾಸವಿರುವ ಹಳೇ ಅರ್ಚಕ ಲಿಂಗೇಶ್ ಮತ್ತು ಅವರ ಸಂಬಂಧಿಕರು ಪಟ್ಟು ಹಿಡಿದಿದ್ದರು. ಇದರಿಂದ ಕೆಲ ಕಾಲ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಮೇಯರ್ ಬಿ.ಜಿ. ಅಜಯ್ ಕುಮಾರ್ ಸಹ ಭೇಟಿ ನೀಡಿ ಮನವೊಲಿಸಲು  ಪ್ರಯತ್ನಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಅಧಿಕಾರಿಗಳೊಂದಿಗೆ ಚರ್ಚಿಸಿ, ದೇಗುಲದ ಬೀಗ ತೆಗೆಸಲು ಮುಂದಾದರು. ಆಗ ಈಗಾಗಲೇ ವಜಾಗೊಂಡಿರುವ ಅರ್ಚಕ ಲಿಂಗೇಶ್, ಪತ್ನಿ ಸುನೀತಾ ಹಾಗೂ ಅವರ ಕುಟುಂಬ ವರ್ಗದವರು ಬೀಗ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ದೇವಸ್ಥಾನದ ಬಾಗಿಲಿನಲ್ಲಿ ನಿಂತು ಪ್ರತಿರೋಧಿಸಿದರು.

ಹೈಕೋರ್ಟ್‍ನಲ್ಲಿ ಪ್ರಕರಣವಿದ್ದು, ಜಿಲ್ಲಾಡಳಿತ ಇಲ್ಲಿ ಪೂಜೆ ನಡೆಯುತ್ತಿರುವುದಾಗಿ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದೆ. ಆದ್ದರಿಂದ ನ್ಯಾಯಾಲಯ ಪ್ರಸ್ತುತ ದೇವಸ್ಥಾನದಲ್ಲಿ ನಡೆಯುತ್ತಿರುವ ಪೂಜೆಯ ಭಾವಚಿತ್ರ ಮತ್ತು ವೀಡಿಯೋ ಸಲ್ಲಿಸುವಂತೆ ಸೂಚಿಸಿದ್ದು, ಸೋಮವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ಅಲ್ಲಿ ಇವುಗಳನ್ನು ಸಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳ ತಲೆ ದಂಡ ಆಗಲಿದೆ. ಆ ಕಾರಣಕ್ಕೆ ಇಂದು ಬಾಗಿಲು ತೆಗೆಸಿ, ಪೂಜೆ ಸಲ್ಲಿಸಿ ಅದರ ವಿಡಿಯೋ ತುಣುಕುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು.

ಬಾಗಿಲು ತೆಗೆಯಲು ಅವಕಾಶ ಮಾಡಿಕೊಡಿ ಪ್ರಕರಣವನ್ನು ಕೋರ್ಟ್‍ನಲ್ಲಿ ಎದುರಿಸಿಕೊಳ್ಳಿ ಎಂದು ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಅದಕ್ಕೆ ಹಳೇ ಅರ್ಚಕನ ಕುಟುಂಬದವರು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಹಳೇ ಅರ್ಚಕ ಲಿಂಗೇಶ್, ಅವರ ಸಹೋದರ ಶಿವಯೋಗಿ, ಲಿಂಗೇಶ್ ಪತ್ನಿ ಸುನೀತಾ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಿ ದೇವಸ್ಥಾನದ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅನುವು ಮಾಡಿಕೊಟ್ಟರು. ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ, ಭಕ್ತರ ಸಮ್ಮುಖದಲ್ಲಿ ಹೊಸ ಅರ್ಚಕರಿಂದ ಪೂಜೆ ನಡೆಯಿತು. ಇತ್ತ ಹೊರಗಡೆ ಹಳೇ ಅರ್ಚಕನ ಕುಟುಂಬದ ಸದಸ್ಯರು ರೋಧಿಸುತ್ತಿದ್ದರು.