ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

ದಾವಣಗೆರೆ, ನ.7- ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ. ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ನಿಜಲಿಂಗಪ್ಪ ಬಡಾವಣೆಯ ಎಂ.ಎಸ್. ಅಬ್ದುಲ್ ಬಷೀರ್ ವಂಚ ನೆಗೊಳಗಾದವರು. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತಿದ್ದು, 2 ತಿಂಗಳ ಹಿಂದೆ ಬೆಂಗಳೂರಿನ ಹೈಕೋರ್ಟ್ ಹತ್ತಿರ ಬಾಗಲಕೋಟೆಯ ಜಿಯಾವುಲ್ಲಾ ಎಂಬಾತ ಪರಿಚಿತನಾಗಿ, ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಕೈ ತುಂಬಾ ಸಂಬಳ ಸಿಗುವ ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. 

ಮೊಬೈಲ್ ನಂಬರ್ ಸಹ ಪಡೆದಿದ್ದ ಜಿಯಾವುಲ್ಲಾ ಒಂದು ತಿಂಗಳ ನಂತರ ಬಷೀರ್ ಅವರಿಗೆ ದೂರವಾಣಿ ಮುಖೇನ ಕರೆ ಮಾಡಿ ಬೆಂಗಳೂರಿನ ನನ್ನ ಸ್ನೇಹಿತನ ಕಂಪನಿಯಲ್ಲಿ ಎರಡು ಕೆಲಸ ಖಾಲಿ ಇದ್ದು, ಒಂದರಿಂದ ಒಂದೂವರೆ ಲಕ್ಷದವ ರೆಗೆ ಸಂಬಳ ಸಿಗುತ್ತದೆ. ಯಾರಾದರೂ ಇದ್ದರೆ ತಿಳಿಸುವಂತೆ ನಾಟಕವಾಡಿದ್ದಾನೆ. 

ಇದನ್ನೇ ನಂಬಿದ ಬಷೀರ್ ಬಿ.ಎ ಆರ್ಕಿಟೆಕ್ಚರ್ ವ್ಯಾಸಂಗ ಮಾಡಿದ್ದ ತನ್ನ ಮಗನಿಗೆ ಹಾಗೂ ಡಿಪ್ಲೋಮಾ ಮಾಡಿದ್ದ ತನ್ನ ಸಹೋದರನ ಮಗನಿಗೆ ಕೆಲಸಕ್ಕೆ ಸೇರಿಸಲು ಹೇಳಿದಾಗ, ಒಬ್ಬರಿಂದ ತಲಾ 3 ಲಕ್ಷವನ್ನು ಡಿಪಾಸಿಟ್ ಕಟ್ಟುವಂತೆ ಜಿಯಾವುಲ್ಲಾ ತಿಳಿಸಿದ್ದು, ಅದಕ್ಕೆ ಒಪ್ಪಿದಾಗ ದಾವಣಗೆರೆಗೆ ಬಂದು ಭೇಟಿಯಾಗಿದ್ದ ಜಿಯಾವುಲ್ಲಾ  ಇಬ್ಬರಿಂದ ತಲಾ ಒಂದೂವರೆ ಲಕ್ಷದಂತೆ 3 ಲಕ್ಷ ಪಡೆದು ಸಂದರ್ಶನಕ್ಕೆ ಕಂಪನಿಯಿಂದ ದಿನಾಂಕ ನಿಗದಿಯಾಗುವುದೆಂದು ತಿಳಿಸಿ ಹೋಗಿದ್ದಾನೆ. ತದನಂತರ ಜಿಯಾವುಲ್ಲಾ ನೀಡಿದ್ದ ದೂರವಾಣಿಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಬಂದಿದ್ದು, ಮೋಸ ಹೋಗಿರುವ ಬಗ್ಗೆ ತಿಳಿದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮುಸ್ತಾಕ್ ಅಹಮದ್ ತನಿಖೆ ಕೈಗೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published.