ನಿಮ್ಮ ವ್ಯಕ್ತಿತ್ವ ವಿಕಸನ ನಿಮ್ಮಿಂದಲೇ…

ನಿಮ್ಮ ವ್ಯಕ್ತಿತ್ವ ವಿಕಸನ ನಿಮ್ಮಿಂದಲೇ…

ಒಂದು ಮನೆ ಕಟ್ಟಲು ಇಟ್ಟಿಗೆಗಳನ್ನು ಒಟ್ಟಿಗೆ ಇಡಬೇಕು ಆದರೆ ಮನೆಗಳನ್ನು ನಡೆಸಲು ಮನಗಳು ಒಟ್ಟಿಗೆ ಇರಬೇಕು, ಹಾಗೆ ವಿವಾಹದ ವೇಳೆ ಕೈ ಹಿಡಿದವಳು ಹೆಂಡತಿ, ಆದರೆ ಜೀವನ ಪರ್ಯಂತ ಕೈ ಬಿಡದವರು, ಕೈ ಹಿಡಿಯುವಳು ಸಂಗಾತಿ ಹಾಗೆ ಒಬ್ಬ ಸಾಮಾನ್ಯ ವ್ಯಕ್ತಿಗೂ ಒಂದು ಧೀಮಂತ ವ್ಯಕ್ತಿತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ನಾವು ವಿಕಸನ ಅಥವಾ ವಿಕಸನಗೊಳ್ಳುವಿಕೆ ಅಥವಾ ತೆರೆದುಕೊಳ್ಳುವಿಕೆ ಎಂದು ಹೇಳಬಹುದು. ಖ್ಯಾತ ಕವಿ ಡಿವಿಜಿ ಅವರು ಹೇಳುವ ಹಾಗೆ `ಜಗವ ತಿದ್ದುವುದಿರಲಿ ಮೊದಲು ನಿನ್ನನ್ನು ನೀನು ತಿದ್ದಿಕೋ’ ಮಂಕುತಿಮ್ಮ. 

ಈ ಮೇಲಿನ ಮಾತುಗಳು ಹೇಳುವುದೇನೆಂದರೆ, ನಮ್ಮನ್ನು ನಾವು ಸುಧಾರಿಸಿಕೊಳ್ಳಬೇಕು, ನಮ್ಮನ್ನು ನಾವು ಸುಧಾರಿಸಿಕೊಳ್ಳಬೇಕು ಎಂದರೆ ನಮ್ಮ ಸುಧಾರಣೆ ನಮ್ಮಿಂದಲೇ ಆಗಬೇಕು ಎಂದರ್ಥ. 

ನಮ್ಮ ಸುಧಾರಣೆ ನಮ್ಮಿಂದ ಆರಂಭವಾಗಬೇಕು. ಜಗತ್ತಿನ ಮಹಾನ್ ಸಾಧಕರೆಲ್ಲ ಮೊದಲು ತಮ್ಮನ್ನು ತಾವು ಸುಧಾರಿಸಿಕೊಂಡು, ನಂತರ ಮತ್ತೊಬ್ಬರಿಗೆ ಸ್ಫೂರ್ತಿದಾಯಕವಾಗಿ ಬದುಕಿದವರು. ಪ್ರತಿಯೊಬ್ಬ ವ್ಯಕ್ತಿ, ಆತ ಏನೇ ಆಗಿರಲಿ ತನ್ನಲ್ಲೇ ಅನೇಕ ಸುಧಾರಣೆಗಳನ್ನು ತಂದುಕೊಳ್ಳುವ ಅವಶ್ಯಕತೆ ಹಾಗೂ ಅವಕಾಶ ಇದ್ದೇ ಇರುತ್ತದೆ. ಇದು ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ದಾಸರ ವಾಣಿಯಂತೆ `ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ’ ಎಂಬ ಮಾತು ಸತ್ಯ.

ಮನುಷ್ಯ ತನಗೆ ಗೊತ್ತಿಲ್ಲದ ವಿಷಯಗಳನ್ನು ಗೊತ್ತಿಲ್ಲವೆಂದು, ತನ್ನ ದೌರ್ಬಲ್ಯಗಳನ್ನು ಅರಿತುಕೊಳ್ಳುವುದನ್ನು ಅವಮಾನವೆಂದು ಯಾವಾಗಲೂ ಭಾವಿಸಬಾರದು. ಹಾಗೇನಾದರೂ ಭಾವಿಸಿಕೊಂಡರೆ, ಅದು ನಮಗೆ ಕೇಡು  ಬಯಸಿದಂತೆ. ನಮ್ಮ ಕೆಡುಕನ್ನು, ನಮ್ಮ ಒಳಿತನ್ನು ನಾವೇ ತಂದುಕೊಂಡ ಹಾಗಾಗುತ್ತದೆ. ಇದನ್ನೇ ತಿಳಿದವರು ಹೇಳುತ್ತಾರೆ `ಇತರರನ್ನು ಅರಿತವನು ಜಾಣ, ತನ್ನನ್ನು ತಾನೇ ಅರಿತವನು ಜ್ಞಾನಿ’ ಎಂದು.

ಒಮ್ಮೆ ಒಬ್ಬ ದಾರಿಹೋಕ ಒಬ್ಬ ಶಿಲ್ಪಿಯನ್ನು ಕುರಿತು, ಕಲ್ಲಿನಿಂದ ಇಷ್ಟೊಂದು ಸುಂದರವಾದ ಮೂರ್ತಿಗಳನ್ನು ಹೇಗೆ  ಮಾಡುತ್ತೀಯಾ ಎಂದು ಪ್ರಶ್ನಿಸುತ್ತಾನೆ?  ಆಗ ಆ ಶಿಲ್ಪಿಯು ಮಾರ್ಮಿಕವಾಗಿ ಉತ್ತರಿಸುತ್ತಾ, ನಾನೇನು ಮೂರ್ತಿಯನ್ನು  ಕೆತ್ತಲಿಲ್ಲ ಅದು ಮೊದಲೇ ಇತ್ತು.  ನಾನು ಮೂರ್ತಿಯನ್ನು ಆವರಿಸಿಕೊಂಡಿದ್ದ ಬೇಡವಾದ ಕಲ್ಲುಗಳನ್ನು ತೆಗೆದು ಹಾಕಿದ್ದೇನೆ. ಹಾಗಾಗಿ ಸುಂದರವಾದ ಮೂರ್ತಿ ಈಚೆಗೆ ಬಂದಿದೆ ಎಂದು.  ಇದನ್ನೇ ನಾವು ವ್ಯಕ್ತಿತ್ವ ವಿಕಸನ ಎಂದು ಹೇಳಬಹುದು. ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ ಆಗಬೇಕು. ವ್ಯಕ್ತಿಯ ನಿಜವಾದ ಗೆಲುವು ಎಂದರೆ ಇತರರೊಂದಿಗಿನ ಗೆಲುವಿಗಿಂತಲೂ, ತನ್ನನ್ನು ತಾನು ಗೆದ್ದುಕೊಂಡ ಗೆಲುವು ಬಹಳ ಮುಖ್ಯ. ಇಲ್ಲಿ ತನ್ನನ್ನು ತಾನು ಗೆದ್ದುಕೊಂಡ ಎಂದರೆ ಬೇರೇನೂ ಅಲ್ಲ.  ನಾವು ಇತರರಲ್ಲಿ ಬಯಸುವ ಬದಲಾವಣೆ ನಮ್ಮಿಂದಲೇ ಆರಂಭಗೊಂಡರೆ, ನಮ್ಮ ವ್ಯಕ್ತಿತ್ವ ವಿಕಸನ ಆರಂಭವಾದಂತೆ.

ಮನುಷ್ಯನಿಗೆ   ಆಗುವ ವಯಸ್ಸಿನೊಂದಿಗೆ ಮನುಷ್ಯನ ವ್ಯಕ್ತಿತ್ವವೂ ಮಾಗಬೇಕು. ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಇರುವುದಕ್ಕಿಂತ ಯೌವ್ವನದಲ್ಲಿ ಭಿನ್ನವಾಗಿರುತ್ತಾನೆ, ಹಾಗೆ ತನ್ನ ಮಧ್ಯವಯಸ್ಸಿನಲ್ಲಿ ಇನ್ನಷ್ಟು ಬದಲಾಗುತ್ತಾ ಹೋಗುತ್ತಾನೆ. ಕೊನೆಯಲ್ಲಿ ಅಂದರೆ ತನ್ನ ವೃದ್ಧಾಪ್ಯದಲ್ಲಿ ಬಹಳಷ್ಟು ಬದಲಾಗುತ್ತಾನೆ. ಇದು ಸಹಜ ಪ್ರಕ್ರಿಯೆಯೂ ಹೌದು.  ಹಾಗೆ ಮನುಷ್ಯನ ವ್ಯಕ್ತಿತ್ವದ ವಿಕಸನದ ಸಂಕೇತವು ಆಗಿದೆ.  ಹಾಗೆ ಎಲ್ಲಾ ಬದಲಾವಣೆಗಳ ಅಗತ್ಯತೆಯು ಮನುಷ್ಯ ಜೀವನದಲ್ಲಿ ಅನಿವಾರ್ಯ. ಇವೆಲ್ಲವುಗಳನ್ನು ನಾವು ವ್ಯಕ್ತಿತ್ವ ವಿಕಸನದ ಫಲಿತಾಂಶಗಳು ಎಂದು ಹೇಳಬಹುದು. ಬದಲಾವಣೆಗಳಿಲ್ಲದೆ ಯಾವುದೇ ಮನುಷ್ಯನ ಬೆಳವಣಿಗೆ ಅಸಾಧ್ಯ. ಹಿಂದಿನ ದಿನಗಳಲ್ಲಿ ನಮ್ಮ ನಡವಳಿಕೆಗಳನ್ನು ನೆನಪಿಸಿಕೊಂಡರೆ ನಮಗೆ ಆಶ್ಚರ್ಯವೂ ಮುಜುಗರ ಆಗಬಹುದು. 

 

ಮನುಷ್ಯ ತನ್ನ ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳಲು ಯಾವುದೇ ರೀತಿಯ ಕಾರ್ಯಾಗಾರ ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ನಮ್ಮ ವ್ಯಕ್ತಿತ್ವ ವಿಕಸನವನ್ನು ನಾವೇ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾದ ಮುಕ್ತ, ಶುದ್ಧ ಮನಸ್ಸು ಇರಬೇಕು. ಸಂಕುಚಿತ ಮನಸ್ಸಿನಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುವುದಿಲ್ಲ, ಸಂಸ್ಕೃತ ವಾಕ್ಯದಂತೆ ಸದ್ವಿಚಾರಗಳು ಎಲ್ಲಿಂದಲೇ ಬರಲಿ ನಾವು ಸ್ವಾಗತಿಸುತ್ತೇವೆ. ಹಾಗಾಗಿ ಒಳ್ಳೆಯ ವಿಚಾರಗಳು ಎಲ್ಲಿಂದಲಾದರೂ ಬರಲಿ ಅದನ್ನು ಸ್ವೀಕರಿಸಬೇಕು. ನಾವು ಏನಾದರೂ ಕಲಿಯುವುದಿದ್ದರೆ ಅದು ಯಾರೇ ಆಗಲಿ ಹಿರಿಯರಿರಲಿ, ಕಿರಿಯರಿರಲಿ ಅವರಿಂದ ಕಲಿಯಬೇಕು. ಕೆಟ್ಟವರಿಂದ ಏನನ್ನು ಮಾಡಬಾರದು ಎಂಬುದನ್ನು ಕಲಿತರೆ, ಒಳ್ಳೆಯವರಿಂದ ಏನು ಮಾಡಬೇಕು ಎಂಬುದನ್ನು ಕಲಿಯಬಹುದು. ಕಲಿಯುವ ಪ್ರಮಾಣಗಳು ಬೇರೆ ಬೇರೆಯಾಗಿರಬಹುದು ಆದರೆ ಪ್ರತಿಯೊಬ್ಬರಲ್ಲೂ ಗುಣ, ದೋಷ, ದೌರ್ಬಲ್ಯ, ಸಾಮರ್ಥ್ಯ ಇದ್ದೇ ಇರುತ್ತವೆ. ಬಹಳ ಸಲ ಇವುಗಳ ಅರಿವೇ ಮನುಷ್ಯನಿಗೆ ಇಲ್ಲದಂತಾಗುತ್ತದೆ. ಈ ಜಗತ್ತಿನಲ್ಲಿ ಯಾರೂ ಪರಿಶುದ್ಧರಲ್ಲ, ಯಾರೂ ಪರಿಪೂರ್ಣರಲ್ಲ, ಎಲ್ಲರಲ್ಲೂ  ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಆದರೆ ಇದರ ಅರಿವು ಅವರಿಗೆ ಇರುವುದಿಲ್ಲ, ಹೇಗೆ ನಮ್ಮ  ಬೆನ್ನು  ನಮಗೆ ಕಾಣಿಸುವುದಿಲ್ಲವೋ ಹಾಗೆ.

ಜಗತ್ತಿನಲ್ಲಿ ಯಾರೂ ನಿಷ್ಪ್ರಯೋಜಕರಲ್ಲ, ಯಾವುದು ನಿಸ್ಪ್ರಯೋಜಕವಲ್ಲ, ಯಾವ ವ್ಯಕ್ತಿಯು  ಸಂಪೂರ್ಣ ವ್ಯರ್ಥ ವ್ಯಕ್ತಿಯಲ್ಲ, ಎಲ್ಲರಲ್ಲೂ ಏನಾದರೊಂದು ಶಕ್ತಿ, ಸಾಮರ್ಥ್ಯ, ಪ್ರತಿಭೆ, ಪಾಂಡಿತ್ಯ ಇದ್ದೇ ಇರುತ್ತದೆ. ಆದರೆ ಬಹಳ ಜನರಿಗೆ ಅವರೊಳಗೆ ಅಡಗಿ ಕುಳಿತಿರುವ ಸಾಮರ್ಥ್ಯದ ಪರಿವೇ ಅವರಿಗೆ ಇರುವುದಿಲ್ಲ. ಹಾಗಾಗಿ ಈ ದಿಕ್ಕಿನಲ್ಲಿ ನೋಡುವುದಾದರೆ ವ್ಯಕ್ತಿತ್ವದ ವಿಕಸನಕ್ಕೆ ಬಹುಮುಖ್ಯವಾಗಿ ಎರಡು ಸೂತ್ರಗಳನ್ನು ಹೇಳಬಹುದು. 

ಅವಗಳೆಂದರೆ, ನಮ್ಮಲ್ಲಿರುವ ದುರ್ಗುಣ, ದೌರ್ಬಲ್ಯ, ಕೊರತೆ ನ್ಯೂನತೆಗಳನ್ನು  ನಾವೇ ಪತ್ತೆಹಚ್ಚಿ ತೋರಿಸಿಕೊಳ್ಳಬೇಕು. ಆದರೆ ಇದು ಎಲ್ಲರಿಗೂ ಸುಲಭ ಸಾಧ್ಯವಲ್ಲ. ಕಾರಣ ಮನುಷ್ಯನಲ್ಲಿರುವ ಅಹಂ. ಮೊದಲು ನಮ್ಮಲ್ಲಿರುವ ನಮ್ಮನ್ನು ನಾವು ತೊಡಗಿಸಿಕೊಂಡು ನಮ್ಮನ್ನು ನಾವು ಅರಿತುಕೊಳ್ಳಬೇಕು.

ಎರಡನೇ ಸೂತ್ರವೆಂದರೆ ನಮ್ಮೊಳಗಿರುವ ಶಕ್ತಿ, ಸಾಮರ್ಥ್ಯಗಳ ಪರಿಚಯವನ್ನು ನಾವೇ ಮಾಡಿಕೊಂಡು, ಅದನ್ನು ಬೆಳೆಸುವುದು ನಮ್ಮಿಂದ ಸಾಧ್ಯವಾಗದಿದ್ದರೆ ನಮ್ಮ ಹಿತಚಿಂತಕರ ಸಹಾಯ ಪಡೆದುಕೊಳ್ಳಬೇಕು.  ನಮ್ಮೊಳಗೆ ಒಬ್ಬ ಸಾಹಿತಿ ಇರಬಹುದು, ಒಬ್ಬ ಕಲೆಗಾರನಿರಬಹುದು, ಒಬ್ಬ ನಟನಿರಬಹುದು, ಒಬ್ಬ ನಾಯಕನಿರಬಹುದು, ಒಬ್ಬ ಸಮಾಜ ಸುಧಾರಕನಿರಬಹುದು, ಆದರೆ ಅದನ್ನು ಕಂಡುಕೊಳ್ಳಲು ನಮಗೆ   ನಮ್ಮ ಹಿತೈಷಿಗಳ, ಗುರುಗಳ, ಸ್ನೇಹಿತರ ಸಹಾಯ ಬಹು ಮುಖ್ಯ. ಹಾಗೆ ಸಂದರ್ಭ ಕೂಡ ಕೂಡಿ ಬರಬೇಕು ಅಲ್ಲಿಯವರೆಗೂ ನಮ್ಮ ಕೆಲಸದಲ್ಲಿ ನಾವು ತಲ್ಲೀನರಾಗಿರಬೇಕು.  ತಾಳ್ಮೆಯಿಂದ ನಮ್ಮತನವನ್ನು ಹೊರಗಡೆ ತರುವುದನ್ನೇ ನಾವು ವಿಕಸನ ಎಂದು ಹೇಳುತ್ತೇವೆ.

ಕೊನೆಯದಾಗಿ ವಿಕಸನ ಎಂದರೆ, ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಮತ್ತು ನಮ್ಮ ಶಕ್ತಿ, ಸಾಮರ್ಥ್ಯವನ್ನು ಅರಿತು ಅವುಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವುದನ್ನು ವಿಕಸನ ಎಂದು ಕರೆಯಬಹುದು.


ವೆಂಕಟೇಶ್ ಬಾಬು ಎಸ್
ಸಹಾಯಕ ಪ್ರಾಧ್ಯಾಪಕ, ದಾವಣಗೆರೆ.
vbsdvg@gmail.com

Leave a Reply

Your email address will not be published.