ಮಾರ್ಕೆಟ್‌ನಲ್ಲಿ ಮಾಸ್ಕ್ ಅಭಿಯಾನ

ಮಾರ್ಕೆಟ್‌ನಲ್ಲಿ ಮಾಸ್ಕ್ ಅಭಿಯಾನ

ದಂಡ ವಿಧಿಸಿ, ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ, ನ. 3 – ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಂಗಳವಾರ ನಗರದ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸ ದವರಿಗೆ ಸ್ಥಳದಲ್ಲೇ ದಂಡ ವಿಧಿಸಿದ್ದಾರಲ್ಲದೇ, ಅಂಗಡಿಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ್ದಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಗಡಿಯಾರ ಕಂಬದಿಂದ ಅಭಿಯಾನ ಆರಂಭಿಸಿ ಮಾರುಕಟ್ಟೆಯ ಜನನಿಬಿಡ ಪ್ರದೇಶಗಳಾದ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಚೌಕಿ ಪೇಟೆ, ಕೆ.ಆರ್. ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಭೇಟಿ ನೀಡಿತು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರೇ ಮಾಸ್ಕ್ ಧರಿಸದವರನ್ನು ಖುದ್ದು ಗುರುತಿಸಿ, ಅಂತಹವರಿಗೆ ಸ್ಥಳದಲ್ಲಿಯೇ ದಂಡ ಪಾವತಿಸುವಂತೆ ಸೂಚಿಸಿದರು. ಅಲ್ಲದೆ ಜಿಲ್ಲಾಧಿಕಾರಿಗಳೇ ಮಾಸ್ಕ್ ವಿತರಿಸಿದರು.  ಬೀದಿ ಬದಿ ವ್ಯಾಪಾರಿಗಳು, ವ್ಯಾಪಾರಿಗಳು, ಗ್ರಾಹಕರು, ಆಟೋ – ಬೈಕ್ ಸಂಚಾರಿಗಳು, ಪಾದಚಾರಿಗಳೂ ಸೇರಿದಂತೆ ಮಾಸ್ಕ್ ಧರಿಸದ 80ಕ್ಕೂ ಹೆಚ್ಚು ಜನರಿಗೆ ತಲಾ 250 ರೂ.ಗಳ ದಂಡ ವಿಧಿಸಲಾಯಿತು.

ಕೆಲವು ಬಟ್ಟೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಇಲ್ಲದೇ ಇರುವುದು, ಜನ ಜಂಗುಳಿ ಹೆಚ್ಚಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಬೀಳಗಿ, ಸರದಿಯಲ್ಲಿ ಗ್ರಾಹಕರನ್ನು ಒಳಗೆ ಬಿಡಬೇಕು. ಮಾಸ್ಕ್‌ನಷ್ಟೇ ಅಂತರವೂ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಮಾಸ್ಕ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.