ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?

ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?

ಕೊರೊನಾ ಈಗ ಅರ್ಧ ಶೈಕ್ಷಣಿಕ ವರ್ಷಗಳನ್ನು ನುಂಗಿ ನೀರು ಕುಡಿದಿದೆ. ವಿದ್ಯಾಗಮಕ್ಕೆ ಎಳ್ಳು ನೀರು ಬಿಟ್ಟ ನಂತರ ರಾಜ್ಯ ಸರ್ಕಾರ ಅಳೆದೂ ತೂಗಿ ಶಿಕ್ಷಕರಷ್ಟೇ ಶಾಲೆಗೆ ಬರಬೇಕು ಎಂದು ಆದೇಶ ಹೊರಡಿಸಿದೆ. 

ಮಕ್ಕಳು ಯಾವಾಗ ಶಾಲೆಗೆ ಬರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವೇಳೆಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆಗಳು ಆರಂಭವಾಗಬೇಕಿತ್ತು. ಮಕ್ಕಳು ಪರೀಕ್ಷೆಗಾಗಿ ತಮ್ಮ ವಿವರಗಳನ್ನು ಸಲ್ಲಿಸಬೇಕಿತ್ತು. ಆದರೆ, ಈಗ ಪರೀಕ್ಷೆ ಇರಲಿ ಪಠ್ಯದ ಸ್ವರೂಪವೇ ನಿರ್ಧಾರವಾಗಿಲ್ಲ.

ಜುಲೈ ತಿಂಗಳಿನಿಂದಲೂ ಜನ ಸಾಮಾನ್ಯರಿಂದ ಶಾಲಾರಂಭದ ಅಭಿಪ್ರಾಯ ಸಂಗ್ರಹಿಸುವ ಮಾತುಗಳನ್ನು ಆಡುತ್ತಲೇ ಬಂದಿರುವ ರಾಜ್ಯ ಸರ್ಕಾರ, ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಇನ್ನೊಂದಿಷ್ಟು ಸಮಿತಿ, ಆಯೋಗ, ಅಧ್ಯಯನ, ಪಿ.ಹೆಚ್.ಡಿ. ಮತ್ತಿನ್ನೇನು ಮಾಡುವ ಇರಾದೆ ಇದೆಯೋ ಗೊತ್ತಿಲ್ಲ. 

ನೀಗದ ಸಂಕಷ್ಟ : ಜನವರಿ ವೇಳೆಗೆ ಕೊರೊನಾ ಲಸಿಕೆ ಬರಲಿದೆ, ಸಮಸ್ಯೆ ಏಕ್‌ದಮ್‌ ನಿವಾರಣೆಯಾಗಲಿದೆ ಎಂಬ ಆಶಾಭಾವನೆ ಕರಗುತ್ತಿದೆ. ಮೊದಲು ಆರೋಗ್ಯ ಕಾರ್ಯಕರ್ತರು, ನಂತರ ಕೊರೊನಾ ವಾರಿಯರ್‌ಗಳು ಹೀಗೆ ಹಂತ ಹಂತವಾಗಿ ಸಾಗಿ ಆರೋಗ್ಯವಂತರಿಗೆ 2022ರ ವೇಳೆಗೆ ಲಸಿಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಹಾಗಾದರೆ 2022ರ ವರೆಗೆ ಮಕ್ಕಳು ಮನೆಯಲ್ಲೇ ಇರಬೇಕೇ? ಯುರೋಪಿನಲ್ಲಿ ಎರಡನೇ ಅಲೆಯ ಕೊರೊನಾ ಭಯಂಕರವಾಗಿ ಹರಡಿದೆ. ಸಾಮಾಜಿಕ ಜೀವನ ಬಂದ್ ಆಗಿದೆ. ಆದರೂ, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವಾರು ದೇಶಗಳು ಶಾಲೆಗಳನ್ನು ಮುಂದುವರೆಸಿವೆ. 

ಪಾಪ… ನಮ್ಮಲ್ಲಿ ಆದ್ಯತೆಗಳೇ ಬೇರೆ ಆಗಿವೆ. ಬಾರ್‌ಗಳು ತೆರೆದಿರಲಿ, ವಿದ್ಯಾದೇಗುಲಗಳು ಮುಚ್ಚಿರಲಿ ಎಂಬ ಘನಂಧಾರಿ ಕೆಲಸ ನಮ್ಮಲ್ಲಿ ನಡೆಯುತ್ತಿದೆ.  ಜನಜಂಗುಳಿಯಾಗುವಂತಹ ಎಲ್ಲ ಚಟುವಟಿಕೆಗಳನ್ನು ಮುಂದುವರೆಸಿ, ಶಾಲೆ ಮಾತ್ರ ಮುಚ್ಚಿದರೆ ಕೊರೊನಾ ನೀಗುತ್ತದೆಯೇ? ಮಕ್ಕಳು ಸುರಕ್ಷಿತವಾಗಿರುತ್ತಾರೆಯೇ?

ಮರೆತ ಪಾಠ : ಎರಡು ತಿಂಗಳು ರಜೆ ನೀಡಿದ ನಂತರ ಮಕ್ಕಳನ್ನು ಶಿಕ್ಷಣದ ದಾರಿಗೆ ತರಲು ಶಿಕ್ಷಕರು ಹರಸಾಹಸ ಪಡಬೇಕಾಗುತ್ತದೆ. ಅಂಥದರಲ್ಲಿ ಅರ್ಧ ವರ್ಷವೇ ಶಾಲೆ ಮುಚ್ಚಿರುವಾಗ ಮುಂದಿನ ಗತಿ ದೇವರಿಗೇ ಗೊತ್ತು. ಅಂಥದರಲ್ಲಿ §ಶೂನ್ಯ ವರ್ಷ’ ಎಂದು ಶಾಲೆಗಳನ್ನು ವರ್ಷದವರೆಗೆ ಮುಚ್ಚಿದರೆ ಬಡ ಮಕ್ಕಳ ಶಿಕ್ಷಣ ಇಡೀ ಜೀವನಕ್ಕೆ ನೈವೇದ್ಯ ಮಾಡಿದಂತೆಯೇ.

ಪಂಜಾಬ್, ಆಂಧ್ರಪ್ರದೇಶ, ಉತ್ತರ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳು ಶಾಲಾರಂಭಕ್ಕೆ ಮುನ್ನುಡಿ ಬರೆದಾಗಿದೆ. ಕರ್ನಾಟಕವೂ ತ್ವರಿತವಾಗಿ ಶಿಕ್ಷಣದ ಕುರಿತು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಪಠ್ಯಕ್ರಮ, ಈಗಾಗಲೇ ಆನ್‌ಲೈನ್‌ನಲ್ಲಿ ಪಾಠ ಕಲಿತವರ ಮುಂದಿನ ಭವಿಷ್ಯ, ಆನ್‌ಲೈನ್‌ ಸಿಗದವರಿಗೆ ನೀಡಬೇಕಾದ ಶಿಕ್ಷಣ ಇತ್ಯಾದಿಗಳ ಕುರಿತು ತ್ವರಿತವಾಗಿ ಸ್ಪಷ್ಟ ನಿಲುವು ತಳೆಯಬೇಕಿದೆ.


ಎಸ್.ಎ. ಶ್ರೀನಿವಾಸ್‌
srinivas.sa@gmail.com

Leave a Reply

Your email address will not be published.