ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸೌಲಭ್ಯ ಸಿಗುವಂತಾದಾಗ ಸಮಾಜದ ಅಭಿವೃದ್ಧಿ ಸಾಧ್ಯ

ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ಸೌಲಭ್ಯ ಸಿಗುವಂತಾದಾಗ ಸಮಾಜದ ಅಭಿವೃದ್ಧಿ ಸಾಧ್ಯ

ಹರಪನಹಳ್ಳಿ : ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ಅಭಿಮತ

ಹರಪನಹಳ್ಳಿ, ಅ.31- ಮೀಸಲಾತಿ ಸೌಲಭ್ಯಗಳು ಕೇವಲ ಉಳ್ಳವರ ಪಾಲಾಗದೇ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಾಲ್ಲೂಕು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಮೀಸಲಾತಿಯ ಸೌಲಭ್ಯಗಳು ಪದೇ ಪದೇ ಉಳ್ಳವರ ಪಾಲಾಗದೇ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಿಕ್ಕಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹರ್ಷಿ ವಾಲ್ಮೀಕಿ ಕೇವಲ ಒಂದು ಜನಾಂಗಕ್ಕೆ ಸೀಮಿತವಲ್ಲ. ಅವರು ವಿಶ್ವ ಮಾನವರು, ಅವರ ಆದರ್ಶಗಳು ಸರ್ವ ಜನಾಂಗಕ್ಕೂ ಮಾದರಿಯಾಗಿವೆ ಎಂದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ರಾಮನನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯನ್ನು ಮರೆಯದೇ ರಾಮ ಮಂದಿರದ ಜೊತೆಗೆ ಮಹರ್ಷಿ ವಾಲ್ಮೀಕಿಯ ಮಂದಿರವೂ ನಿರ್ಮಾಣ ಮಾಡಬೇಕು.  ಸೂರ್ಯ-ಚಂದ್ರರಿರುವವರೆಗೂ ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದ ಆದರ್ಶಗಳು ಶಾಶ್ವತ. ನಮ್ಮ ಸಮಾಜದ ನ್ಯಾಯ ಸಮ್ಮತ ಬೇಡಿಕೆ ಶೇ. 7.5ರ ಮೀಸಲಾತಿ ಹೆಚ್ಚಳ ಕುರಿತು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ನಮ್ಮ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಡಿ.ವೈ.ಎಸ್.ಪಿ. ಮಲ್ಲೇಶ್ ದೊಡ್ಮನಿ ಮಾತನಾಡಿ, ನಾವೆಲ್ಲರೂ ತೋರಿಕೆಗೆ ಮಾತ್ರ ಮಹರ್ಷಿ ವಾಲ್ಮೀಕಿಯಂತೆ ಇದ್ದೇವೆ. ಆದರೆ,
ಅಂತರಾತ್ಮದಲ್ಲಿ ನಮ್ಮಲ್ಲಿ ಬೇಡನ ಕ್ರೌರ್ಯ ಇನ್ನೂ ಇದೆ. ಹಾಗಾಗಿ ನಾವೆಲ್ಲರೂ ಬದಲಾಗಿ ನಮ್ಮಲ್ಲಿರುವ ಬೇಡನ ಕ್ರೌರ್ಯವನ್ನು ಸುಟ್ಟುಹಾಕಿ ವಾಲ್ಮೀಕಿಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.ಬದಲಾವಣೆಯಿಂದಲೇ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಮಹಾನ್‌ ಗ್ರಂಥವನ್ನು ಜಗತ್ತಿಗೆ ನೀಡಲು ಸಾಧ್ಯವಾಯಿತು ಎಂದರು.

ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ,   ಮಹನೀಯರ ಜಯಂತಿಯನ್ನು ಕೇವಲ ಫೋಟೋ ಇಟ್ಟುಕೊಂಡು, ಡಿಜಿ ಹಾಕಿ ರಸ್ತೆಯಲ್ಲಿ ಮೆರವಣಿಗೆ ಮಾಡಿಕೊಂಡು ಕುಣಿಯುವುದಕ್ಕಿಂತ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವಿಸಿದರೆ ಸಾಕು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಯರಬಳ್ಳಿ ಉಮಾಪತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆನಂದ ವೈ. ಡೊಳ್ಳಿನ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್, ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜದ ಕಾರ್ಯ ದರ್ಶಿ ತೆಲಿಗಿ ಗಿರಜ್ಜಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ಮಾಳ್ಗಿ ತಿಮ್ಮೇಶ್, ಜಿ.ಕೆ. ಬಸವರಾಜ್, ವಾಲ್ಮೀಕಿ ನಾಯಕ ಸಮಾಜದ  ಮಾಜಿ ಅಧ್ಯಕ್ಷ ಎಸ್. ದಂಡ್ಯೆಪ್ಪ, ಪಿಎಸ್‍ಐ ಸಿ.ಪ್ರಕಾಶ್, ಉಪನೋಂದಣಿ ಅಧಿಕಾರಿ ದೀಪಾ ಮ್ಯಾಳಿ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್.ಲೋಕೇಶ್, ತಾಲ್ಲೂಕು ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನೀಲಗುಂದ ಟಿ.ಮನೋಜ್, ಜಿ.ಪಂ. ಸದಸ್ಯ ಡಿ.ಸಿದ್ದಪ್ಪ, ತಾ.ಪಂ. ಸದಸ್ಯ ಯಲ್ಲಜ್ಜಿ ಬಸಪ್ಪ, ಅರುಣ್ ಪೂಜಾರ್, ನಿಲಯ ಪಾಲಕರಾದ ದೇವೇಂ ದ್ರಪ್ಪ, ಸಿ.ರಾಘವೇಂದ್ರ, ಎನ್.ಜಿ. ಬಸವರಾಜ್, ಕೆ.ಸುನೀತ, ಡಿ.ಯಾಸ್ಮೀನ್ ಬಾನು, ಯಲ್ಲಮ್ಮ, ತಾಲ್ಲೂಕು ವಾಲ್ಮೀಕಿ ಸಮಾಜದ ಪದಾಧಿಕಾರಿಗಳಾದ ದ್ಯಾಪನಾಯಕನಹಳ್ಳಿ ಜಿ.ಬಸವರಾಜ್, ಒಡ್ಡಿನದಾದಾಪುರದ ಟಿ.ಶಿವಾನಂದ್, ಟಿ.ಯೋಗೀಶ್, ನಂದಿಬೇವೂರು ರಾಜಪ್ಪ, ಹರಿಯಮ್ಮನಹಳ್ಳಿ ಮಂಜುನಾಥ್,  ಮಹಿಳಾ ಸಂಘಟನೆಯ ಕಂಚಿಕೇರಿ ವಿಜಯಲಕ್ಷ್ಮಿ, ಹೆಚ್.ಎ.ಶಾಲಿನಿ, ಟಿ.ಪದ್ಮಾವತಿ, ಮಂಜುಳ, ಹನುಮಕ್ಕ, ಪವಿತ್ರ, ಪೊಲೀಸ್ ಸಿಬ್ಬಂದಿ ಎಂ.ಮಲ್ಲೇಶ್‍ನಾಯ್ಕ, ಏಕಲವ್ಯ ಸಂಘರ್ಷ ಸಮಿತಿಯ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ಶಿವರಾಜ, ಬಾಣದ ಅಂಜಿನಿ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published.