ನಾಡು ಕಂಡ ಅಪ್ರತಿಮ ಕವಿ ವಾಲ್ಮೀಕಿ

ನಾಡು ಕಂಡ ಅಪ್ರತಿಮ ಕವಿ ವಾಲ್ಮೀಕಿ

ಹರಿಹರ, ಅ.31- ನಾಡು ಕಂಡ ಅಪ್ರತಿಮ ಕವಿ ಮಹರ್ಷಿ ವಾಲ್ಮೀಕಿ. ಅವರ ಆದರ್ಶ ಮತ್ತು  ತತ್ವಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಬೇಕು ಎಂದು ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಇಂದು ನಡೆದ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಲ್ಮೀಕಿ ಸಮಾಜದ ನಗರ ಘಟಕದ ಅಧ್ಯಕ್ಷ ಕೆ.ಬಿ. ಮಂಜುನಾಥ್ ಮಾತನಾಡಿ, ಸರ್ಕಾರವು ವಾಲ್ಮೀಕಿ ಜಯಂತಿಯಂದು ಫೋಟೋ ಪೂಜೆ ಮಾಡಿ ಹಾರವನ್ನು ಹಾಕಿದರೆ ವಾಲ್ಮೀಕಿ ಸಮಾಜಕ್ಕೆ ಗೌರವವನ್ನು ನೀಡಿದಂ ತಾಗುವುದಿಲ್ಲ, ಬದಲಾಗಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಿದರೆ ಮಾತ್ರ ನಮ್ಮ ವಾಲ್ಮೀಕಿ ಸಮಾಜಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.

ಜೆಡಿಎಸ್ ಮುಖಂಡ ವಕೀಲ ಮಾರುತಿ ಬೇಡರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕೃತಿಯನ್ನು ರಚಿಸಿ ದೇಶಕ್ಕೆ ಒಳ್ಳೆಯ ಸಂಸ್ಕೃತಿಯ ಕೊಡುಗೆ ನೀಡಿದ್ದಾರೆ. ಇವತ್ತಿಗೂ ಸಾರ್ವಜನಿಕರು ಅದನ್ನು ಪಾಲನೆ ಮಾಡಿಕೊಂಡು ಹೊರಟಿದ್ದಾರೆ.  ಇಂತಹ ಮಹಾನ್ ನಾಯಕರ ಸಮಾಜಕ್ಕೆ ಸರ್ಕಾರ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಳ ಮಾಡುವುದಕ್ಕೆ ಮೀನಾ-ಮೇಷ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.

ಅಕ್ಷರ ದಾಸೋಹ ಇಲಾಖೆಯ ಅಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಸಮಾಜದಲ್ಲಿ ಸುಧಾರಣೆ ತರಲು ಅನೇಕ ಕೃತಿಗಳನ್ನು ರಚಿಸಿ ಸರ್ವರಲ್ಲೂ ಜ್ಞಾನ ತುಂಬುವ ಕೆಲಸವನ್ನು ಮಾಡಿದ್ದರಿಂದ ವಿಶ್ವಮಟ್ಟದಲ್ಲಿ ಹೆಸರನ್ನು ಮಾಡುವುದಕ್ಕೆ ದಾರಿಯಾಯಿತು. ವಿಶ್ವಮಾನವರಾದ ವಾಲ್ಮೀಕಿ ಒಂದು ಜಾತಿಗೆ ಸೀಮಿತವಾಗಿ ಯಾವುದೇ ಕೆಲಸವನ್ನು ಮಾಡಿರುವುದಿಲ್ಲ. ವಿಶ್ವದ ಒಳಿತಿಗಾಗಿ ಕೆಲಸವನ್ನು ಮಾಡಿದರು ಅಂತಹ ಮಹಾನ್ ನಾಯಕರು ಒಂದೇ ಜಾತಿಗೆ ಮಾತ್ರ ಮೀಸಲು ಅಲ್ಲ. ಅವರು ವಿಶ್ವದ ಪ್ರಬುದ್ಧ ವ್ಯಕ್ತಿಗಳ ಸಾಲಿನಲ್ಲಿ ಇವರು ಒಬ್ಬರು ಎಂದು ಹೇಳಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಪಿತೃವಾಕ್ಯ ಪರಿಪಾಲನೆ, ಸೀತೆಯ ಏಕ ಪತ್ನಿ ವ್ರತದ ಬಗ್ಗೆ ಲಕ್ಷ್ಮಣ ಕೊಟ್ಟ ಮಾತು ಉಳಿಸಿಕೊಳ್ಳುವಿಕೆ ಇವುಗಳ ಬಗ್ಗೆ ರಾಮಾಯಣ ಮೂಲಕ ಜನರನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಮಾನವೀಯ ಮೌಲ್ಯಗಳನ್ನು ಇಂದಿನ ಜನಾಂಗವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. 

ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಂಗಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ರಾಜನಹಳ್ಳಿ ಗುರು ಪೀಠದ ಆಡಳಿತಾಧಿಕಾರ ಟಿ. ಓಬಳಪ್ಪ, ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ, ನಗರಸಭೆ ಸದಸ್ಯ ದಿನೇಶ್ ಬಾಬು, ಎಂ.ಎಸ್. ಬಾಬುಲಾಲ್,  ದೇವೇಂದ್ರಪ್ಪ, ಬಸವರಾಜ್, ಮಕ್ರಿ ಪಾಲಾಕ್ಷಪ್ಪ, ಪರಶುರಾಮ್, ಮಂಜುನಾಥ್, ಮಾರುತಿ ಬರ್ಕಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಗಡಿ ರೇವಣಸಿದ್ದಪ್ಪ, ಎಮ್.ವಿ. ಹೊರಕೇರಿ, ಉಮ್ಮಣ್ಣ, ಆಟೋ ರಾಜು ಮತ್ತಿತರರು ಹಾಜರಿದ್ದರು.

Leave a Reply

Your email address will not be published.