ಶ್ರೀ ಸರಸ್ವತಿ ದೇವಿ ಆಹ್ವಾನ

ಶ್ರೀ ಸರಸ್ವತಿ ದೇವಿ ಆಹ್ವಾನ

ನವರಾತ್ರಿಯ  ಮೂಲ ನಕ್ಷತ್ರದಂದು ಆಹ್ವಾನಿಸುವೆ ದೇವಿ
ವಾಗ್ದೇವಿಯಾಗಿ ನಲಿದಾಡು  ನಾಲಿಗೆ ಮೇಲೆ ನೀ ಸರಸ್ವತಿ
ಸಂಗೀತ ಕಲೆ ಮತ್ತು ವಾಕ್ ಚಾತುರ್ಯದ  ಸೆಲೆ ನೀನು
ಶ್ರದ್ದೆ ಭಕ್ತಿ ನೀತಿ ನಿಯಮದಿಂದಲೇ  ಓಲೈಸುವೆ ನಾನು
ನಿನ್ನ ಕಚ್ಚಪ್ಪಿ ವೀಣಾ ನಾದಕ್ಕೆ ಮೆಚ್ಚಿದಳು ಮಾತೆ ಲಲಿತೆ
ಶಂಕರಚಾರ್ಯಗೆ ಒಲಿದು ಆದೇ ನೀ ಶೃಂಗೇರಿ ಶಾರದೆ
ಒಂದು ಕೈಯಲ್ಲಿ ಜಪಮಾಲೆ ಇನ್ನೊಂದರಲ್ಲಿ ಪುಸ್ತಕ
ತುಂಬಲಿ ನಿನ್ನ ದಿವ್ಯ ದೃಷ್ಟಿಯಿಂದ ಎಮ್ಮ ಮಸ್ತಕ
ಚಂಚಲೆ ಶ್ರೀಲಕ್ಷ್ಮಿ ಸ್ಥಿರತೆ ಕಾಣುವುದು ನಿನ್ನೊಂದಿಗೆ
ಇರುವುದು ಆಕೆಗೆ ನಿನ್ನ ಭದ್ರ ಜ್ಞಾನ ಶಕ್ತಿಯ ಅಂಜಿಕೆ
ವಿನಯ ವಂತರ,  ಗುಣ ವಂತರ, ಸೊತ್ತು ನೀನು
ನಿರಹಂಕಾರದಿಂದ ನಿನ್ನ ಪಡೆಯಲು ಆತುರರು ನಾವು
ನೀಡು ನೀನು ಸಜ್ಜನರ ಸಂಘ ಬಯಸುವ ಸದ್ಬುದ್ಧಿ
ಕರುಣಿಸು ಎಮಗೆ ನಿಶ್ಚಲತತ್ವ ನಿರ್ಮೋಹದ ಜೀವನ್ಮುಕ್ತಿ
ಇಚ್ಛಾಶಕ್ತಿ ,ಜ್ಞಾನ ಶಕ್ತಿ ಕ್ರಿಯಾ ಶಕ್ತಿಗಳು ಪೂರಕವಾಗಿರಲಿ
ನಮ್ಮ ಪಂಚೇಂದ್ರಿಯಗಳು ನಿಖರತೆಯ ನಿಗ್ರಹದಲ್ಲಿರಲಿ
ಅನ್ಯರ ಮನ ನೋಯಿಸದ  ಶುಕ ವಾಣಿ  ನಮ್ಮದಾಗಲಿ
ನುಡಿದಂತೆ ನಡೆಯುವ  ಚೈತನ್ಯಶಕ್ತಿ ನಮ್ಮದಾಗಲಿ.


ಡಾ|| ಆರತಿ ಸುಂದರೇಶ್
ದಾವಣಗೆರೆ.