ಕೆಣಕದಿರು ಪ್ರಕೃತಿಯ..!

ಕೆಣಕದಿರು ಪ್ರಕೃತಿಯ..!

ಪ್ರಕೃತಿಯ ವೈವಿಧ್ಯತೆಗೆ ಎಡೆಯಿದೆಯೇ
ಆಕೃತಿಗಳ ಉಗಮಕ್ಕೆ
ನಾದಕ್ಕೆ ಸ್ವಾದಕ್ಕೆ ತಡೆಯಿದೆಯೇ?

ಕಾಡು ಮೇಡು ಗುಡ್ಡ ಬಯಲು
ಮಳೆ ಬೆಳೆ ಗುಡುಗು ಸಿಡಿಲು
ಸಾಗರದ ಅಬ್ಬರ  ಪ್ರವಾಹ
ಶಬ್ದ ನಿಶ್ಯಬ್ದ ಮೌನ ಗಾನ.

ಪಕ್ಷಿಗಳ ಕಲರವ ಸಿಂಹ ಘರ್ಜನೆ
ಮೀನಿನ ಈಜಾಟ ಕಪ್ಪೆಗಳ ವಟವಟ
ನವಿಲು ನರ್ತನ ಜೇಡನ ಕೈಚಳಕ
ಇರುವೆಗಳ ಮೆರವಣಿಗೆ.

ಒಂದೇ ಎರಡೇ, ಮಾತೆ ನಾ ಸೋತೆ
ನಿನ್ನಾಟಗಳ ಎಣಿಕೆಯಿಡಲು
ಶಾಂತಳಾಗಿರೆ ನೀನು
ಆಡಿ ಹಾಡಿ ಕುಣಿದು ಕುಪ್ಪಳಿಸಿ
ತೋರ್ಪೆ ನಿನ್ನ ಸೊಬಗ.

ಆದರೀ ನರ ಜಾತಿ
ಕನ್ನ ಹಾಕಿತು ನಿನ್ನ ಬುಟ್ಟಿಗೆ
ಅಟ್ಟಹಾಸದಿ ಮಿತಿಯ ಮೀರಿತು

ನಿನ್ನ ಇರುವನೇ ಮರೆತು
ಸೃಷ್ಟಿ ಬತ್ತಿತು ಗಾಳಿ  ಕೆಟ್ಟಿತು
ಸಹನೆ ಮೀರಿತು ಕೋಪ ಏರಿತು
ಎಸೆದೆ ಕೋವಿಡಾಸ್ತ್ರವನು ಜಗದಗಲ.

ತತ್ತರಿಸಿ ತುಂಡಾಗಿ ಬೀಳುತಿವೆ
ನರಜೀವಿಗಳು ತೋರದೇನು ಮಾಡಲು
ಪುಂಡಾಟವನು ತುಂಡರಿಸಿ
ಇನ್ನೆಲ್ಲ ಜೀವರಾಶಿಗೆ ಕೊಟ್ಟಿರುವೆ
ಸಂತಸದಿ ಜೀವಿಸುವ ವರವ.

ಬರೆ ಬಿದ್ದ ಮನುಜಕುಲ
ಅರಿತಿಹುದು ಇಂದು
ಜಗದುಸಿರು ಸ್ಥಿರವಾಗಿರಲು
ಎಲ್ಲರೊಳಗೊಂದಾಗಿ ಬಾಳಬೇಕೆಂದು!!


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
ashivakumar@yahoo.com

Leave a Reply

Your email address will not be published.